ಬೈಲಹೊಂಗಲ: ‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ, ರಾಷ್ಟ್ರಪ್ರೇಮದ ಕುರಿತು ಮಕ್ಕಳಿಗೆ ತಿಳಿಸಿ, ಅವರಲ್ಲಿ ದೇಶಾಭಿಮಾನ ಬೆಳೆಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಶನಿವಾರ ವೀರಜ್ಯೋತಿ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿ ಅವರು ಮಾತನಾಡಿದರು.
‘ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಸಂಚರಿಸಿದ ಜ್ಯೋತಿ ವಾಹನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬರುವ ದಿನಗಳಲ್ಲಿ ಕಿತ್ತೂರು ಉತ್ಸವ ರಾಷ್ಟ್ರ ಮಟ್ಟದಲ್ಲಿ ಪ್ರಚಾರಗೊಂಡು ರಾಷ್ಟ್ರೀಯ ಉತ್ಸವವಾಗಿ ಹೊರಹೊಮ್ಮಲಿ’ ಎಂದರು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಕಿತ್ತೂರು ಉತ್ಸವ ಈ ಭಾಗದ ಜನರಿಗೆ ಹೆಮ್ಮೆಯಾಗಿದೆ. ಎಲ್ಲರೂ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದರು.
ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಬಸವರಾಜ ನಾಗರಾಳ, ತಾ.ಪಂ ಇಒ ಸುಭಾಷ ಸಂಪಗಾಂವ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜನಾ ಬೊಂಗಾಳೆ, ಮಂಗಲಾ ಮೆಟಗುಡ್ಡ, ಸುಧೀರ ವಾಲಿ, ರಾಯಣ್ಣ ಸ್ಮರಣೋತ್ಸವ ಸಮಿತಿ ಸೋಮನಾಥ ಸೊಪ್ಪಿಮಠ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ, ಮುರುಳಿಧರ ಮಾಳೋದೆ, ವಿಶ್ವನಾಥ ಮಾತಾಡೆ, ಅಮಿತ ಪಾಟೀಲ, ನಾರಾಯಣ ನಲವಡೆ, ನಾಗಪ್ಪ ಗುಂಡ್ಲೂರ ಇದ್ದರು.