ಚಿತ್ರದುರ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಶೀಘ್ರದಲ್ಲಿಯೇ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಚಿತ್ರದುರ್ಗ ಜಿಲ್ಲೆಗೂ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗುವುದು.
ಜಿಲ್ಲೆಗೆ ಸಚಿವ ಸ್ಥಾನ ನಿಡದೇ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಮಂತ್ರಿಗಿರಿ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಕ್ಕೆ ಕ್ರಮ ಕೈಗೊಳ್ಳಲಾಗುವುದು. ಒಂದೊಮ್ಮೆ ಈ ಯೋಜನೆ ಪೂರ್ಣಗೊಂಡರೆ ರಾಜ್ಯದಲ್ಲಿಯೇ ಮೊದಲ ರಾಷ್ಟ್ರೀಯ ನೀರಾವರಿ ಯೋಜನೆಯಾಗಲಿದೆ ಎಂದರು.