ಆನ್‍ಲೈನ್ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎಐಯುಟಿಯುಸಿ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಸರ್ದಾರ್ ಮೈದಾನದಿಂದ ಆರಂಭವಾದ ಈ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಿತು. ಈ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಶಾ ಕಾರ್ಯಕರ್ತೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳಿನಿಂದ 5 ಸಾವಿರ ವೇತನ ಸಿಕ್ಕಿಲ್ಲ. ಎಷ್ಟೋ ಕಾರ್ಯಕರ್ತೆಯರು ಈ ವೇತನದ ಮೇಲೆ ಜೀವನ ನಡೆಸುವವರಿದ್ದಾರೆ. ಒಂಟಿ ಮಹಿಳೆಯರಿದ್ದಾರೆ, ವಿಧವೆಯರಿದ್ದಾರೆ. ಇಂತ ಸಂದರ್ಭದಲ್ಲಿ ಪ್ರತಿ ತಿಂಗಳು ವೇತನ ಕೊಟ್ಟಿಲ್ಲ ಎಂದರೆ ಸರ್ಕಾರಕ್ಕೆ ನಾಚಿಕೆ ಆಗಬೇಕು. ಅದೇ ರೀತಿ ತಳಮಟ್ಟದಲ್ಲಿ ಬೇರೆ ಕೆಲಸವನ್ನು ಒತ್ತಾಯಪೂರ್ವಕಾಗಿ ಮಾಡಿಸಲಾಗುತ್ತಿದೆ. ಮೊಬೈಲ್ ಕೊಟ್ಟಿಲ್ಲ ಆದರೆ ಮೊಬೈಲ್‍ನಲ್ಲಿ ವಿವಿಧ ಕೆಲಸ ಮಾಡಿಸುತ್ತಿದ್ದಾರೆ. ಈ ಕೆಲಸ ಮಾಡದಿದ್ರೆ ಪೆಮೆಂಟ್ ಕಟ್ ಮಾಡುತ್ತೇವೆ ಎಂದು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ.
ಅದೇ ರೀತಿ ಬರುವ ವೇತನದಲ್ಲಿಯೇ ಐನೂರು, ಸಾವಿರ ರೂಪಾಯಿ ಸ್ಟಾಪ್ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅವರು ಯಾವುದೇ ಸೇವೆ ಇದ್ದರೂ ಮಾಡುತ್ತಾರೆ. ಕೊರೊನಾ ಸಂದರ್ಭದಲ್ಲಿಯೂ ಇವರ ಸೇವೆ ಗುರುತಿಸಿ ವಿಶ್ವ ಆರೋಗ್ಯ ಸಂಸ್ಥೆ ಸಾಮಾಜಿಕ ಆರೋಗ್ಯ ನಾಯಕರು ಎಂದು ಬಿರುದು ಕೊಟ್ಟಿದೆ. ಈ ಬಿರುದಿನಿಂದ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ತಕ್ಷಣವೇ ವೇತನ ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
Laxmi News 24×7