ಯಾದಗಿರಿ/ಕಲಬುರಗಿ: ಯಾದಗಿರಿ ಮತ್ತು ಕಲಬುರಗಿಯಲ್ಲಿ ಇಂದು ಬೆಳಗ್ಗೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಪಿಎಫ್ಐ ಮುಖಂಡರನ್ನು ನ್ಯಾಯಾಂಗ ವಶಕ್ಕೆ ನೀಡಲು ತಾಲೂಕು ದಂಡಾಧಿಕಾರಿಗಳು ಆದೇಶ ಹೋರಡಿಸಿದ್ದಾರೆ.
ಕಲಬುರಗಿಯ ಇಕ್ಬಾಲ್ ಕಾಲೋನಿ ನಿವಾಸಿ ಮಜರ್ ಹುಸೇನ್ , ಮಿಲ್ಲತ್ ನಗರದ ಇಸಾಮೊದ್ದಿನ್ ಇಬ್ಬರ ಮನೆ ಮೇಲೆ ದಾಳಿ ನಡೆಸಿ ತೀವ್ರ ಶೋಧ ನಡೆಸಿ, ನಂತರ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಬಳಿಕ ಕಲಬುರಗಿ ತಾಲೂಕು ದಂಡಾಧಿಕಾರಿ ಪ್ರಕಾಶ ಕುದರಿ ಅವರ ಮುಂದೆ ಇಬ್ಬರನ್ನು ಹಾಜರುಪಡಿಸಲಾಗಿತ್ತು. ಇಬ್ಬರನ್ನೂ 10 ದಿನ, ಬರುವ ಅಕ್ಟೋಬರ್ 7 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ (ಕೆ) ಗ್ರಾಮದ ಪಿಎಫ್‌ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮೊಹ್ಮದ್ ಮೆಹಬೂಬ್ ರ(32) ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಸಂಘಟನೆ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ವಾರದ ಹಿಂದಷ್ಟೇ ದಾಳಿ ನಡೆಸಿ, ಅನೇಕರ ಬಂಧಿಸಿದ ಬೆನ್ನಲ್ಲೇ, ರಾಜ್ಯದ ವಿವಿಧೆಡೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.