ಬೆಂಗಳೂರು: ಕರ್ನಾಟಕ ಕೈಗಾರಿಕಾ ವಿವಾದ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ 2020ನ್ನು ಸರ್ಕಾರ ವಾಪಸ್ ಪಡೆದಿದೆ. ನಿನ್ನೆ(ಸೋಮವಾರ) ವಿಧಾನಸಭೆಯಲ್ಲಿ ಈ ಮಸೂದೆಯನ್ನು ಹಿಂಪಡೆಯಲಾಯಿತು.
ಕೈಗಾರಿಕಾ ವಿವಾದ ಮಸೂದೆ ವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಬಿದ್ದು ಹೋಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಈ ಮಸೂದೆಯನ್ನು ಪರಿಷತ್ನಲ್ಲಿ ವಿರೋಧಿಸಿದ್ದರು.
ರಾಜ್ಯದಲ್ಲಿ ವಹಿವಾಟನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ವಿಧೇಯಕವನ್ನು ತಂದಿತ್ತು. ತಿದ್ದುಪಡಿ ವಿಧೇಯಕ 300 ಅಥವಾ ಅದಕ್ಕಿಂತ ಹೆಚ್ಚಿಗೆ ಉದ್ಯೋಗಿಗಳಿರುವ ಸಂಸ್ಥೆಗಳು ಮುಚ್ಚಲು, ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲು ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು.
ಅದಕ್ಕೂ ಮೊದಲು 100ರ ಮಿತಿ ಇತ್ತು.ಜೊತೆಗೆ, ಉದ್ಯೋಗಿಗಳ ಒಟಿ (ಓವರ್ ಟೈಂ)ನ್ನು 75 ರಿಂದ 125 ತಾಸುಗಳಿಗೆ ಏರಿಕೆ ಮಾಡುವ ಪ್ರಸ್ತಾವನೆ ಹೊಂದಿತ್ತು. ಹಲವು ಕಾರ್ಮಿಕ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಲ ಬಿಜೆಪಿ ಸದಸ್ಯರು ಮೇಲ್ಮನೆಯಲ್ಲಿ ಈ ವಿಧೇಯಕದ ಬದಲಾವಣೆಗೆ ಆಗ್ರಹಿಸಿದ್ದರು.
Laxmi News 24×7