ಚಿತ್ರದುರ್ಗ: ಡಾ| ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ದೂರಿನ ವಿಚಾರಣೆ ಚುರುಕುಗೊಂಡಿದ್ದು, ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಕೋರಿ ಶ್ರೀಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮುರುಘಾ ಮಠ ಹಾಗೂ ಶ್ರೀಗಳ ಪರ ವಕೀಲರು ಚಿತ್ರದುರ್ಗದ 2ನೇ ಸೆಷನ್ಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.
1ಕ್ಕೆ ಮುಂದೂಡಿದೆ.
ಈ ನಡುವೆ ಶ್ರೀಗಳ ವಿರುದ್ಧ ದೂರು ನೀಡಿದ್ದ ಬಾಲಕಿಯರನ್ನು ಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಸೋಮವಾರ ಸಂಜೆ 4.30ರ ಸುಮಾರಿಗೆ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಇಬ್ಬರು ಬಾಲಕಿಯರನ್ನು ಮಹಜರಿಗಾಗಿ ಮಠಕ್ಕೆ ಕರೆತಂದರು.
ಇದಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಮಠಕ್ಕೆ ಆಗಮಿಸಿ ಭದ್ರತೆ ಪರಿಶೀಲಿಸಿದರು. ಮಠದಲ್ಲಿ ಕೃತ್ಯ ನಡೆದಿರುವ ಸ್ಥಳ, ವಿದ್ಯಾರ್ಥಿನಿಯರ ಹಾಸ್ಟೆಲ್ ಇತ್ಯಾದಿ ಸ್ಥಳಗಳ ಮಹಜರು ನಡೆಸಲಾಗಿದೆ.