ಸಾಗರ: ರಾಜ್ಯ ಸರ್ಕಾರ ಪಂಚಮಸಾಲಿ-ಗೌಡ ಲಿಂಗಾಯಿತ, ಮಲೇಗೌಡ ದೀಕ್ಷಾ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಮತ್ತು ಕೇಂದ್ರ ಸರ್ಕಾರ ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡದೆ ಹೋದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.
ತಾಲೂಕಿನ ಕೆಳದಿಯಲ್ಲಿ ಮಂಗಳವಾರ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ವತಿಯಿಂದ ರಾಣಿ ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮಲೆನಾಡು ಭಾಗದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸತತ ಮೂರು ಬಾರಿ ನೀಡಿದ ಭರವಸೆ ಹುಸಿಯಾಗಿದ್ದು, ಈ ತಿಂಗಳ 23ಕ್ಕೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಈ ಬಾರಿಯೂ ಮಾತು ಮುರಿದರೆ ಸಮುದಾಯ ತನ್ನ ಆಕ್ರೋಶವನ್ನು ಯಾವ ರೀತಿ ವ್ಯಕ್ತಪಡಿಸುತ್ತದೆ ಎಂದು ಗೊತ್ತಿಲ್ಲ. ಸರ್ಕಾರ ಅದಕ್ಕೆ ಅವಕಾಶ ನೀಡದೆ ಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.