ಬೆಂಗಳೂರು: ಸಂಪುಟ ವಿಸ್ತರಣೆ ಬಗ್ಗೆ ಅನುಮತಿ ಕೇಳುವುದಕ್ಕಾಗಿ ಯಾರೂ ದಿಲ್ಲಿಗೆ ಬರುವುದು ಬೇಡ. ವಿಸ್ತರಣೆ ಮಾಡುವಾಗ ನಾವೇ ಹೇಳುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಅವರ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್.ಅಶೋಕ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಅವರು, ಸಂಪುಟ ವಿಸ್ತರಣೆಗಾಗಿ ಮತ್ತೆ ದಿಲ್ಲಿಗೆ ಬರುವುದು ಬೇಡ. ಒಂದೊಮ್ಮೆಅಗತ್ಯ ಸೃಷ್ಟಿಯಾದರೆ ನಾವೇ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ ಆಗಸ್ಟ್ 15 ರ ಬಳಿಕ ಪಕ್ಷ ಹಾಗೂ ಸರಕಾರದ ಮಟ್ಟದಲ್ಲಿ ಭಾರಿ ಬದಲಾವಣೆ ನಿರೀಕ್ಷೆಯಿದೆ. ಚುನಾವಣಾ ದೃಷ್ಟಿಯಿಂದ ಸಂಪುಟ ಪುನಾರ್ರಚನೆ ಮಾಡಿ ಸೋಷಿಯಲ್ ಎಂಜಿನಿಯರಿಂಗ್ ಕೆಲಸಕ್ಕೆ ಬಿಜೆಪಿ ಕೈ ಹಾಕಲಿದೆ.