ರಾಣೆಬೆನ್ನೂರು (ಹಾವೇರಿ ಜಿಲ್ಲೆ): ‘ಮುಂದಿನ ವಿಧಾನ ಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಪ್ರಕಾಶ ಕೋಳಿವಾಡ ಅವರಿಗೆ ರಾಣೆಬೆನ್ನೂರು ಕ್ಷೇತ್ರ ಬಿಟ್ಟು ಕೊಡುತ್ತಿದ್ದೇನೆ’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.
ಇಲ್ಲಿನ ವಾಗೀಶನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನನ್ನ ನಿರ್ಧಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಪುತ್ರನೇ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ’ ಎಂದರು.
‘ರಾಜ್ಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ಪುತ್ರನಿಗೆ ಅವಕಾಶ ಮಾಡಿಕೊಡಿ, ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ನಾಯಕರು ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಚುನಾವಣೆಗಳಿಂದ ಹಿಂದೆ ಸರಿದಿದ್ದೇನೆ. ಹಿರಿಯರು ಚುನಾವಣೆಗೆ ತಯಾರಿ ಮಾಡಿಕೊಳ್ಳಲಿಕ್ಕೆ ತಿಳಿಸಿದ್ದಾರೆ. ಪ್ರಕಾಶ ಕೋಳಿವಾಡ ಕೂಡ ಈಗಾಗಲೇ ಕ್ಷೇತ್ರದಲ್ಲಿ ತನ್ನ ಪ್ರಯತ್ನ ನಡೆಸಿದ್ದಾರೆ’ ಎಂದರು.
‘ಹೈಕಮಾಂಡ್ ಅವಕಾಶ ಮಾಡಿಕೊಟ್ಟರೆ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ’ ಎಂದರು.
‘ನಾನು ಕಳೆದ ಹತ್ತಾರು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕೆಪಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಸದಾ ಜನರ ಸೇವೆಯಲ್ಲಿ ತೊಡಗಿದ್ದೇನೆ. ನನಗೆ ಟಿಕೆಟ್ ನೀಡುವ ಭರವಸೆ ಇದೆ’ ಎಂದು ಯುವ ಮುಖಂಡ ಪ್ರಕಾಶ ಕೆ.ಕೋಳಿವಾಡ ಪ್ರತಿಕ್ರಿಯಿಸಿದ್ದಾರೆ.