ಇತ್ತಿಚೆಗೆ ಬೆಳಗಾವಿಯ ಅಳವನಗಲ್ಲಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಕಳಪೆ ಗುಣಮಟ್ಟದ ಬಿಸಿಯೂಟದ ಬಗ್ಗೆ ದಕ್ಷಿಣ ಶಾಸಕ ಅಭಯ್ ಪಾಟೀಲ್ ಗರಂ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ತಾಲೂಕಾ ಪಂಚಾಯತಿ ಕಾರ್ಯಾಲಯದ ಅಕ್ಷರ ದಾಸೋಹ ವಿಭಾಗದಿಂದ ಬಿಸಿಯೂಟ ಸರಬರಾಜು ಮಾಡುವ ಸಮೃದ್ಧಿ ಸೇವಾ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
ಹೌದು ಅಳವನಗಲ್ಲಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಕಳಪೆ ಗುಣಮಟ್ಟದ ಬೇಳೆ ಮತ್ತು ಅಕ್ಕಿಯನ್ನು ಬಳಸಿರುವುದು ಬಹಿರಂಗವಾಗಿತ್ತು. ಸ್ವತಃ ಶಾಸಕ ಅಭಯ್ ಪಾಟೀಲ್ ಶಾಲೆಗೆ ಭೇಟಿ ನೀಡಿ, ಮಕ್ಕಳ ಜೊತೆಗೆ ಕುಳಿತುಕೊಂಡು ಊಟ ಮಾಡಿ ಬಿಇಓ ಹಾಗೂ ಅಕ್ಷರದಾಸೋಹದ ಸಹಾಯಕ ನಿರ್ದೇಶಕರನ್ನು ಶಾಲೆಗೆ ಕರೆಸಿಕೊಂಡು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿದ್ರೆ ಸಂಬಂಧಿಸಿದ ಸಂಸ್ಥೆಯವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.
ಇನ್ನು ಸರ್ಕಾರದ ನಿಯಮದಂತೆ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ. ಆದರೆ ಸಮೃದ್ಧಿ ಸೇವಾ ಸಂಸ್ಥೆಯವರು ಮಧ್ಯಾಹ್ನದ ಬಿಸಿಯೂಟದಲ್ಲಿ ಸರ್ಕಾರದ ಮೇನು ಪ್ರಕಾರ ಹಾಗೂ ನಿಯಮಗಳಂತೆ ತರಕಾರಿ, ಬೇಳೆ ಬಳಸುತ್ತಿಲ್ಲ. ಅಕ್ಕಿಯನ್ನು ಸ್ವಚ್ಛಗೊಳಿಸದೇ ಅನ್ನ ತಯಾರಿಸಲಾಗುತ್ತಿದೆ. ಅಲ್ಲದೇ ಎಂಒಯು ಒಡಂಬಡಿಕೆಯ ಷರತ್ತುಗಳ ಪ್ರಕಾರ ಬಿಸಿಯೂಟವನ್ನು ಕಂಟೇನರ್ ಬಳಸಿ ಸರಬರಾಜು ಮಾಡಬೇಕಾಗಿರುತ್ತದೆ. ಆದರೆ ಸಮೃದ್ಧಿ ಸೇವಾ ಸಂಸ್ಥೆಯು ಕಂಟೇನರ್ ಬಳಸದೇ ಬಿಸಿಯೂಟ ಸರಬರಾಜು ಮಾಡುತ್ತಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಮಧ್ಯಾಹ್ನ ಉಪಹಾರ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಶಾಲಾ ಮಕ್ಕಳಿಗೆ ಪೌಷ್ಠಿಕಾಂಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಹಾಗೂ ಯಾವುದೇ ರೀತಿಯ ಮಕ್ಕಳಿಗೆ ಅನಾಹುತ ಸಂಭವಿಸಬಾರದು ಎಂಬ ದೃಷ್ಟಿಯಿಂದ ತಮ್ಮ ಸಂಸ್ಥೆಗೆ ಹಲವಾರು ಬಾರಿ ಸೂಚನೆ ನೀಡಿದ್ರೂ ತಮ್ಮ ನಿರ್ಲಕ್ಷ್ಯತನ ಹಾಗೆಯೇ ಮುಂದುವರಿದಿದೆ. ಮೇಲಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.
ಕಾರಣ ಈ ಕುರಿತು ತಮ್ಮ ಸಂಸ್ಥೆಯ ಮೇಲೆ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಏಕೆ ಶಿಫಾರಸ್ಸು ಮಾಡಬಾರದು ಎಂಬುದರ ಬಗ್ಗೆ ತಮ್ಮ ಲಿಖಿತ ಹೇಳಿಕೆಯನ್ನು ಈ ಪತ್ರ ತಲುಪಿದ ಮೂರು ದಿನಗಳೊಳಗೆ ಖುದ್ದಾಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಮ್ಮನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.