ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರು ಮನೆಯಿಂದ ಹೊರಬರುವುದೇ ಕಡಿಮೆ ಎನ್ನುವಂಥ ಪರಿಸ್ಥಿತಿ ಇತ್ತು.
ಆದರೆ ಕಾಲ ಬದಲಾಗಿದೆ. ಇದೀಗ ಈ ಭಾಗದ ಯುವತಿಯೋರ್ವಳು ಭಾರತೀಯ ಸೇನೆ ಸೇರುವ ಮೂಲಕ ಮಾದರಿಯಾಗಿದ್ದಾಳೆ.
ವಿಜಯಾ ಹದ್ಲಿ, ಬಾಗಲಕೋಟೆ ತಾಲೂಕಿನ ಯಡಹಳ್ಳಿ ಗ್ರಾಮದ ನಿವಾಸಿ. ಮೊದಲ ಪ್ರಯತ್ನದಲ್ಲಿ ದೇಶ ಸೇವೆ ಮಾಡುವ ಅವಕಾಶ ಪಡೆದಿದ್ದಾರೆ. ದೈಹಿಕ ಶಿಕ್ಷಕಿ ಆಗಬೇಕು ಎಂದುಕೊಂಡಿದ್ದರಂತೆ. ಆದರೆ, ಸಿಆರ್ಪಿಎಫ್ ಯೋಧೆಯಾಗಿ ದೇಶ ಸೇವೆಗೆ ಹೊರಟಿದ್ದಾರೆ.
2021ರಲ್ಲಿ ಬೆಂಗಳೂರಿನ ಯಲಹಂಕದಲ್ಲಿ ನಡೆದ ಸಿಆರ್ಪಿಎಫ್ ನೇಮಕಾತಿಯಲ್ಲಿ ಆಯ್ಕೆಯಾದ ವಿಜಯಾ ಯಡಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಗದ್ದನಕೇರಿ ಹಾಗೂ ಬಾಗಲಕೋಟೆಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ತಂದೆ ಕಲ್ಲಪ್ಪ, ತಾಯಿ ರೇಣುಕಾ ದಂಪತಿಯ ಒಟ್ಟು ನಾಲ್ವರು ಹೆಣ್ಣುಮಕ್ಕಳಲ್ಲಿ ವಿಜಯಾ ಎರಡನೇ ಮಗಳು.
“ನಮ್ಮ ಮನೆಯಲ್ಲಿ ನನಗೆ ಎಲ್ಲಾ ರೀತಿಯಲ್ಲೂ ಸಪೋರ್ಟ್ ಸಿಕ್ಕಿತು. ನನ್ನ ತಂಗಿ ಹಾಗೂ ಅಕ್ಕ ಯಾವುದಕ್ಕೂ ಕೊರತೆ ಮಾಡಿಲ್ಲ. ಊರಿನವರು ಕೂಡಾ ಬೆಂಬಲ ಕೊಟ್ಟರು” ಎಂದು ವಿಜಯಾ ಹದ್ಲಿ ತಿಳಿಸಿದರು.