ಅಗ್ನಿಪಥ್ ಯೋಜನೆ ಸಂಬಂಧ ಬೆಳಗಾವಿ ಬಂದ್‍ಗೆ ಯಾವುದೇ ರೀತಿ ಅನುಮತಿ ಇಲ್ಲ. ಅನುಮತಿ ಇಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಎಚ್ಚರಿಸಿದ್ದಾರೆ.
ಹೌದು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ದೇಶಾಧ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ನಮ್ಮ ಬೆಳಗಾವಿ ಜಿಲ್ಲೆಯಲ್ಲಿಯೂ ಸಾಕಷ್ಟು ಯುವಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಆ ನಿಟ್ಟಿನಲ್ಲಿ ನಾಳೆ ಸೋಮವಾರ ಬೆಳಗಾವಿ ಬಂದ್‍ಗೆ ಕೆಲ ಯುವಕರು ಕರೆ ನೀಡಿದ್ದಾರೆ. ಈ ಸಂಬಂಧ ಬೆಳಗಾವಿಯ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಬೆಳಗಾವಿಯಲ್ಲಿ ಅಗ್ನಿಪಥ್ ಯೋಜನೆ ಸಂಬಂಧ ನಾಳೆ ಬೆಳಗಾವಿ ಚಲೋ ಹಾಗೂ ಬೆಳಗಾವಿ ಬಂದ್ ಮಾಡಲು ಹೊರಟಿದ್ದಾರೆ. ಅವರು ಯಾವುದೇ ರೀತಿ ಮನವಿ ಮಾಡಿಕೊಂಡಿಲ್ಲ. ನಾಳೆ ಏನಾದ್ರೂ ಅಹಿತಕರ ಘಟನೆಗಳು ಸಂಭವಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ.
ಡ್ರೋನ್ ಕ್ಯಾಮರಾ ಉಪಯೋಗಿಸಿಕೊಂಡು ರೈಲ್ವೇ ನಿಲ್ದಾಣ ಸೇರಿದಂತೆ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಕಣ್ಗಾವಲು ಇಡುತ್ತೇವೆ. ಬಂದೋಬಸ್ತ್ ಬಗ್ಗೆಯೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.