ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಹಸ್ರಾರು ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತ ಸಂಸದ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ನಡುವೆಯೇ, ನಟಿ, ಮಾಜಿ ಸಂಸದೆ ರಮ್ಯಾ ಮತ್ತೆ ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿಯವರ ವಿರುದ್ಧ ವಿನಾಕಾರಣ ಸುಳ್ಳು ಆಪಾದನೆ ಹೊರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನು ರಾಹುಲ್ ಗಾಂಧಿಯವರ ಜತೆ ಅತ್ಯಂತ ಸಮೀಪದಿಂದ ಕೆಲಸ ಮಾಡಿದ್ದೇನೆ. ಅವರನ್ನು ನಾನು ಅತಿ ಹತ್ತಿರದಿಂದ ನೋಡಿದಂತೆ ಅವರು ಎಂದಿಗೂ ಭ್ರಷ್ಟರು ಎಂದು ಎನಿಸಲಿಲ್ಲ. ಅವರು ಭ್ರಷ್ಟರೂ ಅಲ್ಲ, ದುರಾಸೆಯ ವ್ಯಕ್ತಿಯೂ ಅಲ್ಲ. ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಹೆಸರಿಗೆ ಕಳಂಕ ತರಲು ಈ ರೀತಿ ಮಾಡಲಾಗುತ್ತಿದೆ. ವಿನಾಕಾರಣ ಅವರನ್ನು ಈ ಪ್ರಕರಣದಲ್ಲಿ ಎಳೆಯಲಾಗುತ್ತಿದೆ ಎಂದು ಟ್ವೀಟ್ ಮೂಲಕ ನಟಿ ಕಿಡಿ ಕಾರಿದ್ದಾರೆ.