ಬೆಂಗಳೂರು: ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನ “ಆತ್ಮಸಾಕ್ಷಿಯ ಮತಗಳು” ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲುವಿನ ದಡ ಹತ್ತಿಸಿದೆ.
ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕೆ ಇಳಿಸಿದ ಕ್ಷಣದಿಂದ ಜೆಡಿಎಸ್ ನ ಆತ್ಮಸಾಕ್ಷಿ ಮತಗಳು ನಮ್ಮ ಪರವಾಗಿ ಚಲಾವಣೆಯಾಗಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.
ಕಾಂಗ್ರೆಸ್ ಎಲ್ಲ ನಾಯಕರು ಇದೇ ಮಾತನ್ನು ಆಡಿದ್ದರು. ಅಂದರೆ ಪರೋಕ್ಷವಾಗಿ ಜೆಡಿಎಸ್ ನಿಂದ ಅಡ್ಡಮತದಾನಕ್ಕೆ ಬಹಿರಂಗ ಆಹ್ವಾನ ನೀಡಿದ್ದರು.
ಆದರೆ ಮತದಾನದ ದಿನ ಆತ್ಮಸಾಕ್ಷಿಯ ಮತಗಳು ದೊಡ್ಡ ಪ್ರಮಾಣದಲ್ಲಿ ಚಲಾವಣೆಯಾಗಿಲ್ಲ. ಸುಮಾರು ಹನ್ನೆರಡು ಆತ್ಮಸಾಕ್ಷಿ ಮತಗಳು ತಮ್ಮ ಪರವಾಗಿ ಚಲಾವಣೆಯಾಗಬಹುದೆಂದು ಸುದ್ದಿ ಹಬ್ಬಿಸಿದ ಕಾಂಗ್ರೆಸ್ ಈಗ ಮೌನವಾಗಿದೆ. ಆದರೆ ಒಂದು ಮತ (ಕೋಲಾರ ಶ್ರೀನಿವಾಸ್ ಗೌಡ) ಮಾತ್ರ ಕಾಂಗ್ರೆಸ್ ಪರ ಚಲಾವಣೆಯಾಗಿದೆ.
ಆದರೆ ಜೆಡಿಎಸ್ ಹಾಗೂ ಬಿಜೆಪಿಯ ಮಧ್ಯೆ ಗೆಲುವು ನಿರ್ಧರಿಸುವ ಒಂದು ಮತವೂ ಇದೆ ಆಗಿದೆ. ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅಧಿಕೃತ 32 ಮತಗಳ ಜತೆಗೆ 90 ಎರಡನೇ ಪ್ರಾಶಸ್ತ್ಯದ ಮತ ಪಡೆದಿದ್ದಾರೆ. ಜೆಡಿಎಸ್ ನ 32 ಮತಗಳ ಪೈಕಿ ಒಂದು ಆತ್ಮಸಾಕ್ಷಿಯ ರೂಪದಲ್ಲಿ ಕಾಂಗ್ರೆಸ್ ನ ಬುಟ್ಟಿ ಸೇರಿದ್ದರೆ, ಇನ್ನೊಂದು ಅಸಿಂಧುವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಗೆ ನಿರಾಯಾಸ ಗೆಲುವು ಲಭಿಸಲಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ತನ್ನ ಒಂದು ಕಣ್ಣು ಐಬಾದರೂ, ಜೆಡಿಎಸ್ ನ ಎರಡು ದೃಷ್ಟಿ ಕಳೆದ ಸಂತೋಷ ಮಾತ್ರ ಈಗ ಸಿದ್ದರಾಮಯ್ಯ ಅವರಿಗೆ ಲಭಿಸಿದಂತಾಗಿದೆ.