ಬೆಳಗಾವಿ: ‘ಸಂಗೀತಕ್ಕೆ ಮರುಳಾಗದವರಿಲ್ಲ’ ಎಂದು ಆರ್ಷ ವಿದ್ಯಾಶ್ರಮದ ಚಿತ್‌ಪ್ರಕಾಶಾನಂದ ಸ್ವಾಮೀಜಿ ಹೇಳಿದರು.
ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಕವಿ ಜಿನದತ್ತ ದೇಸಾಯಿ-90ರ ಸಂಭ್ರಮದ ಅಂಗವಾಗಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾವ್ಯಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಗೀತದಲ್ಲಿ ದೊಡ್ಡ ಶಕ್ತಿ ಇದ್ದು, ತನ್ನ ಮೋಡಿಯಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ’ ಎಂದರು.
ಕವಿ ಜಿನದತ್ತ ದೇಸಾಯಿ ಮಾತನಾಡಿ, ‘ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ಗಮಕ ಮಾದರಿಯದಾಗಿದೆ. ಭಾವಗೀತೆಗಳಲ್ಲೂ ಪ್ರಯೋಗ ಮಾಡಬಾರದು ಎಂಬ ನನ್ನ ಆಲೋಚನೆಯನ್ನು ಮಂಗಲಾ ಮಠದ ಕಾರ್ಯರೂಪಕ್ಕೆ ತಂದಿರುವುದು ಸಂತೋಷ ಉಂಟು ಮಾಡಿದೆ’ ಎಂದು ತಿಳಿಸಿದರು.
ರಾಗಲೀಲೆ ಶಿಖರವು, ನಾವು ಶಾಂತಿಯ ಭಕ್ತರು, ನಿನ್ನ ಹುಬ್ಬಿನಲಿ ಸನ್ನೆ ಮಾಡು, ಸುಡಗಾಡ ಸಿದ್ದ ಬಂದಾನ ತಂಗಿ, ಸದ್ದು ಮಾಡಲಿಲ್ಲ ಕದ್ದು ಬಂದ ಚಂದ್ರಂತೆ, ಜನ ಮಂಗಲ ಜಯ ಮಂಗಲ ಜಗ ಮಂಗಲ, ಚಿಕ್ಕಿ ಇವರ ಕೈಗೆ ಸಿಕ್ಕಿ, ದಾರಿದೀಪ ಹೀಗೆ… ಜಿನದತ್ತ ಅವರ ರಚನೆಯ ಭಕ್ತಿಗೀತೆ, ಪ್ರೇಮಗೀತೆ, ಭಾವಗೀತೆಗಳಿಗೆ ಗಾಯಕಿ ಮಂಗಲಾ ಮಠದ ಅವರು ರಾಗಸಂಯೋಜಿಸಿ ಹಾಡಿದರು. ಅವರೊಂದಿಗೆ ರತ್ನಶ್ರೀ, ಮಮತಾ, ಹೇಮಾ, ಶೈಲಾ, ಶೋಭಾ, ಪ್ರೀತಿ ಧ್ವನಿಗೂಡಿಸಿದರು. ಸುಡಗಾಡ ಸಿದ್ದ ಹಾಗೂ ನಂದಾದೀಪ ಕವಿತೆಗಳನ್ನು ನೀಲಗಂಗಾ ಚರಂತಿಮಠ ಹಾಡಿದರು. ಅಶೋಕ ಕಟ್ಟಿ ಹಾರ್ಮೋನಿಯಂ ಹಾಗೂ ನಿತಿನ ಸುತಾರ ತಬಲಾ ಸಾಥ್ ನೀಡಿದರು.
ಸಾಹಿತಿಗಳಾದ ಬಸವರಾಜ ಜಗಜಂಪಿ, ಎಲ್.ಎಸ್. ಶಾಸ್ತ್ರಿ, ರಮೇಶ ಹೊಂಗಲ, ಪ್ರೊ.ಎಂ.ಎಸ್. ಇಂಚಲ, ಡಾ.ಸಿ.ಕೆ. ಜೋರಾಪೂರ, ಡಾ.ಹೇಮಾವತಿ ಸೊನೊಳ್ಳಿ, ಜ್ಯೋತಿ ಬದಾಮಿ, ಆಶಾ ಯಮಕನಮರಡಿ, ಶ್ರೀರಂಗ ಜೋಶಿ, ರಾಜೇಂದ್ರ ಮಠದ, ಪತ್ರಕರ್ತ ಮುರಗೇಶ ಶಿವಪೂಜಿ ಇದ್ದರು.