Breaking News

ಬೆಳಗಾವಿ: ಅನ್ನಭಾಗ್ಯ ಅಕ್ಕಿ ಮಾರಾಟ,ಅಧಿಕಾರಿಗಳು ನಿಗಾ ವಹಿಸಿ ಕಡಿವಾಣ ಹಾಕುತ್ತಿದ್ದರೂ ದಂಧೆಕೋರರು ಬಗ್ಗುತ್ತಿಲ್ಲ.

Spread the love

ಬೆಳಗಾವಿ: ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ನೆರವಾಗುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಗಿರುವ ‘ಅನ್ನಭಾಗ್ಯ’ ಮೊದಲಾದ ಯೋಜನೆಯಲ್ಲಿ ನೀಡಲಾಗುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ, ಕಾಳಸಂತೆಯಲ್ಲಿ ಮಾರುವ ದಂಧೆಯು ಎಗ್ಗಿಲ್ಲದೆ ನಡೆಯುತ್ತಲೇ ಇದೆ.

ಅಧಿಕಾರಿಗಳು ನಿಗಾ ವಹಿಸಿ ಕಡಿವಾಣ ಹಾಕುತ್ತಿದ್ದರೂ ದಂಧೆಕೋರರು ಬಗ್ಗುತ್ತಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಈ ನಡುವೆಯೂ ಅಕ್ರಮ ಸಾಗಾಟ- ಮಾರಾಟಕ್ಕೆ ತಡೆ ಬಿದ್ದಿಲ್ಲ. 2019ರಿಂದ ಇದೇ ಏಪ್ರಿಲ್‌ 16ರವರೆಗೆ ಬರೋಬ್ಬರಿ 3,886.55 ಕ್ವಿಂಟಲ್‌ ‘ಅನ್ನಭಾಗ್ಯ’ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಇದು, ₹ 85.67 ಲಕ್ಷ ಮೌಲ್ಯದ್ದಾಗಿದೆ. ₹ 72.50 ಲಕ್ಷ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 38 ಆರೋಪಿಗಳನ್ನು ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆಯಲ್ಲಿ 41 ಪ್ರಕರಣಗಳನ್ನು ದಾಖಲಿಸಲಾಗಿದೆ.

ಬೇರೆ ಕಡೆ ಮಾರಾಟ

ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಳ್ಳುವುದು ವರದಿಯಾಗುತ್ತಲೇ ಇದೆ. ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ಅವರಿಂದ ಕೆ.ಜಿ.ಗೆ ₹15ರಿಂದ ₹20ಕ್ಕೆ ಖರೀದಿಸುವ ದಂಧೆಕೋರರು ಅದನ್ನು ಸಂಗ್ರಹಿಸಿ ಕ್ವಿಂಟಲ್‌ಗಟ್ಟೆಲೆ ಆದ ನಂತರ ಪಾಲಿಶ್ ಮಾಡಿ ಕೆ.ಜಿ.ಗೆ ₹ 25ರಿಂದ ₹ 30ಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಮಾರುವುದು ಕಂಡುಬರುತ್ತಿದೆ. ಗಡಿ ಜಿಲ್ಲೆಯಾದ ಇಲ್ಲಿ ಮಹಾರಾಷ್ಟ್ರದಲ್ಲಿ ಮಾರುತ್ತಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ಕ್ವಿಂಟಲ್‌ಗಟ್ಟಲೆ ಅಕ್ಕಿಯನ್ನು ವಿವಿಧೆಡೆ ಅನಧಿಕೃತವಾಗಿ ಸಂಗ್ರಹಿದ್ದುದು ಹಾಗೂ ಮಾರಾಟಕ್ಕೆ ಸಾಗಿಸುತ್ತಿದ್ದುದ್ದನ್ನು ಪತ್ತೆ ಹಚ್ಚಿದ್ದಾರೆ. ದಾವಣಗೆರೆ, ಹಾವೇರಿ, ಧಾರವಾಡ ಮೊದಲಾದ ಜಿಲ್ಲೆಗಳಿಂದ ಮಹಾರಾಷ್ಟ್ರದ ಕಡೆಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಡಿವಾಣ ಸವಾಲು

ಕೋವಿಡ್ ಆರಂಭವಾದಾಗಿನಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಡಿತರ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪಡಿತರ ಚೀಟಿಯಲ್ಲಿ ಹೆಸರಿರುವವರಿಗೆ ತಲಾ 10 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಈ ತಿಂಗಳಿಂದ ಪ್ರಮಾಣವನ್ನು 11 ಕೆ.ಜಿ.ಗೆ ಏರಿಸಲಾಗಿದೆ. ಫಲಾನುಭವಿಗಳು, ತಮಗೆ ದೊರೆಯುವ ಅಕ್ಕಿಯನ್ನು ಮಾರಿಕೊಳ್ಳುತ್ತಿರುವುದು ಅಕ್ರಮಕ್ಕೆ ಮೂಲದಲ್ಲಿ ಕಡಿವಾಣ ಹಾಕುವುದಕ್ಕೆ ತೊಡಕಾಗಿ ಪರಿಣಮಿಸಿದೆ ಎನ್ನುತ್ತಾರೆ ಅಧಿಕಾರಿಗಳು.

‘ಕುಟುಂಬದಲ್ಲಿ ಹೆಚ್ಚಿನ ಸದಸ್ಯರು ಇರುವವರಿಗೆ ದೊರೆಯುವ ಅಕ್ಕಿ ಪ್ರಮಾಣ ಜಾಸ್ತಿ ಇರುತ್ತದೆ. ಇದರಲ್ಲಿ ಹೆಚ್ಚುವರಿ ಎನಿಸಿದ್ದನ್ನು ಮಾರಿಕೊಳ್ಳುವುದು ಕಂಡುಬರುತ್ತಿದೆ. ಆ ಅಕ್ಕಿಯು ಇಡ್ಲಿ, ದೋಸೆ ಮಾಡುವುದಕ್ಕೆ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೆ, ಪಡಿತರ ಚೀಟಿದಾರರಿಂದ ಕೆಲವರು ಖರೀದಿಸುತ್ತಾರೆ ಎನ್ನುವುದು ಗೊತ್ತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ‘ಪಡಿತರ ಅಕ್ರಮ ಸಾಗಣೆ ಹಾಗೂ ಮಾರಾಟದ ಮೇಲೆ ನಿಗಾ ವಹಿಸಲಾಗಿದೆ. ಯಾವುದೇ ಸಮಯದಲ್ಲಿ ದೂರು ಬಂದರೂ ನಮ್ಮ ಸಿಬ್ಬಂದಿ ಮೂಲಕ ಪರಿಶೀಲಿಸಲಾಗುತ್ತಿದೆ. ದಾಳಿ ನಡೆಸಿ, ಅಕ್ಕಿ- ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ. ಪೊಲೀಸರ ನೆರವಿನಿಂದ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಈ ಮೂಲಕ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ತಾವೇ ಬಳಸಬೇಕು

ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ತಾವೇ ಬಳಸಿಕೊಳ್ಳಬೇಕು. ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಬಾರದು.

-ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ಇಲಾಖೆ


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ