ಕಾರವಾರ: ಭಟ್ಕಳ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಜಾರ್ ಬ್ರಾಂಚ್‌ನ ವ್ಯವಸ್ಥಾಪಕ ಬ್ಯಾಂಕಿನ ಹಣವನ್ನು ದುರುಪಯೋಗ ಪಡಿಸಿಕೊಂಡು ಸುಮಾರು 1.50 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ಭಟ್ಕಳ ಪಟ್ಟಣದ ಬಜಾರ್ ಶಾಖೆಯಲ್ಲಿ 2019 ರಿಂದ ಶಾಖಾ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸಿದ್ದ ಅನೂಪ್ ದಿನಕರ್ ಪೈ ಬ್ಯಾಂಕಿನ ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಅನೂಪ್ ಬ್ಯಾಂಕಿನ ಗ್ರಾಹಕರೊಂದಿಗೆ ಸೇರಿಕೊಂಡು, ಸಿಸ್ಟಮ್ ಸಸ್ಪೆನ್ಸ್ ಖಾತೆಗೆ ಖರ್ಚು ಹಾಕಿ ಬ್ಯಾಂಕಿನ ಗ್ರಾಹಕರ ಖಾತೆಗೆ ಹಣ ಜಮಾ ಮಾಡಿ ತಾನೇ ವಿತ್ ಡ್ರಾ ಮಾಡಿಕೊಂಡು, ಅದರ ದುರುಪಯೋಗ ಮಾಡುತ್ತಿದ್ದ.
2019 ರಿಂದಲೂ ಅನೂಪ್ ಇದೇ ರೀತಿಯಾಗಿ ವಂಚನೆಯಲ್ಲಿ ತೊಡಗಿಕೊಂಡಿದ್ದು, 2022ರ ಆಡಿಟ್ ವೇಳೆ ಇದು ಬೆಳಕಿಗೆ ಬಂದಿದೆ. ಸುಮಾರು 1.50 ಕೋಟಿ ರೂ. ವಂಚನೆ ನಡೆದಿರುವುದು ತಿಳಿದುಬಂದ ತಕ್ಷಣ ಅನೂಪ್‌ನನ್ನು ಶಾಖಾ ವ್ಯವಸ್ಥಾಪಕ ಹುದ್ದೆಯಿಂದ ಸಸ್ಪೆಂಡ್ ಮಾಡಲಾಗಿತ್ತು. ವಂಚನೆ ನಡೆಸಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಇದೀಗ ಅನೂಪ್ ನಾಪತ್ತೆಯಾಗಿದ್ದಾನೆ. ಆತ ವಾಸವಿದ್ದ ಬಾಡಿಗೆ ಮನೆಯನ್ನು ಪೊಲೀಸರು ಶೋಧಿಸಿದ್ದಾರೆ.