ಪಿಎಸ್ಐ ನೇಮಕ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತೆಂಬ ವಿಷಯವನ್ನು ಸಿಐಡಿ ತಂಡ ಬಯಲಿಗೆಳೆದಿದೆ. ಪ್ರಕರಣದ ಕಿಂಗ್ಪಿನ್ ಆರ್.ಡಿ.ಪಾಟೀಲ್(ರುದ್ರಗೌಡ ಪಾಟೀಲ್) ಎಫ್ಡಿಎ, ಎಸ್ಡಿಎ ನೌಕರಿ ಕೊಡಿಸುವ ಡೀಲ್ ಕೂಡ ನಡೆಸುತ್ತಿದ್ದರೆಂಬುದು ವಿಚಾರಣೆ ವೇಳೆ ಬಹಿರಂಗಗೊಂಡಿರುವುದಾಗಿ ತಿಳಿದು ಬಂದಿದೆ.
ಮತ್ತೊಂದೆಡೆ ಕಿರಿಯ ಇಂಜಿನಿಯರ್ ಪರೀಕ್ಷೆಯ ಉತ್ತರ ಹೇಳುವ ವಿಡಿಯೋವೊಂದು ವೈರಲ್ ಆಗಿದೆ.
ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವೆಸಗಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರ್.ಡಿ. ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಭಾನುವಾರ 13 ದಿನ ಸಿಐಡಿ ವಶಕ್ಕೆ ಒಪ್ಪಿಸಿದೆ. ಪಾಟೀಲ್ ಜತೆಗಿದ್ದ ಜತೆಗಿದ್ದ ತಾಪಂ ಮಾಜಿ ಸದಸ್ಯ ಮಲ್ಲುಗೌಡ ಅಲಿಯಾಸ್ ಮಲ್ಲಿಕಾರ್ಜುನ ಬಿದನೂರ ಎಂಬುವರನ್ನೂ ಸಿಐಡಿ ಬಂಧಿಸಿದೆ. ಈ ಮೂಲಕ ಬಂಧಿತರ ಸಂಖ್ಯೆ 15ಕ್ಕೇರಿದೆ. ಮಲ್ಲುಗೌಡ 2014ರಲ್ಲಿ ಅಫಜಲಪುರ ತಾಲೂಕಿನ ಬಿದನೂರ ತಾಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದರು. ಆ ಕೆಲಸಗಳಿಗಾಗಿ ಆರ್.ಡಿ.ಪಾಟೀಲ್ ಬಳಿ 50 ಲಕ್ಷ ರೂ. ಸಾಲ ಪಡೆದಿದ್ದರು. ಮಲ್ಲುಗೌಡನ ಪತ್ನಿ ತವರು ಸೊಲ್ಲಾಪುರ ಆಗಿದ್ದರಿಂದ ಆರ್.ಡಿ.ಪಾಟೀಲ್ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪ ಅವರ ಮೇಲಿದೆ. ಆರ್.ಡಿ.ಪಾಟೀಲ್ರನ್ನು ಶನಿವಾರ ಸಂಜೆ ಪುಣೆ ಹೊರವಲಯದಲ್ಲಿ ಸಿಐಡಿ ಪೊಲೀಸರು ಬಂಧಿಸಿ ಭಾನುವಾರ ನಸುಕಿನ ಜಾವ 3ರ ಸುಮಾರಿಗೆ ಕಲಬುರಗಿಗೆ ಕರೆತಂದರು.
ಬೆಳಗ್ಗಿನ 5ರವರೆಗೆ ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕಿದರು. ತನ್ನ ವಶದಲ್ಲಿರುವ ಬಂಧಿತರನ್ನು ಶನಿವಾರ ತಡರಾತ್ರಿಯಿಂದ ಭಾನುವಾರ ನಸುಕಿನ ಜಾವದವರೆಗೂ ಸಿಐಡಿ ಅಧಿಕಾರಿಗಳು ಪ್ರಶ್ನಿಸಿ ಮೂಲಕ ಮಾಹಿತಿ ಕಲೆ ಹಾಕಿದರು. ನಂತರ ಎಲ್ಲರನ್ನು ಜಿಮ್್ಸ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿದ ಬಳಿಕ ವಿಚಾರಣೆ ಮುಂದುವರಿಸಿದ್ದಾರೆ.
ಓಎಂಆರ್ ಶೀಟ್, ಹಾಲ್ಟಿಕೆಟ್ ಪತ್ತೆ: ಆರ್.ಡಿ.ಪಾಟೀಲರನ್ನು ಕಲಬುರಗಿಗೆ ಕರೆತಂದ ಬಳಿಕ ಅವರ ಮನೆಗೆ ಕರೆದೊಯ್ದು ಶೋಧ ನಡೆಸಿದ ವೇಳೆ 15 ಓಎಂಆರ್ ಶೀಟ್ ಮತ್ತು ಕೆಲ ಅಭ್ಯರ್ಥಿಗಳ ಹಾಲ್ಟಿಕೆಟ್ ಪತ್ತೆಯಾಗಿದ್ದು, ವಶಪಡಿಸಿಕೊಂಡರು. ಈ ಓಎಂಆರ್ ಶೀಟ್ ಮತ್ತು ಹಾಲ್ ಟಿಕೆಟ್ಗಳು ಪಿಎಸ್ಐ ನೇಮಕ ಸೇರಿ ಈ ಹಿಂದೆ ಜರುಗಿದ ಎಫ್ಡಿಎ, ಎಸ್ಡಿಎ ಪರೀಕ್ಷೆಗಳದ್ದು ಎಂದು ಗೊತ್ತಾಗಿದೆ.
ಈ ಹಿಂದಿನ ಎಕ್ಸಾಂಗಳಲ್ಲೂ ಅಕ್ರಮ: ಇತ್ತೀಚೆಗೆ ನಡೆದಿದ್ದ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ (ಜೆಇ) ಸೇರಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಸ್ಡಿಎ, ಎಫ್ಡಿಎ, ಹಾಸ್ಟೆಲ್ ವಾರ್ಡನ್ ಇತರ ನೇಮಕ ಪರೀಕ್ಷೆಗಳಲ್ಲಿಯೂ ಆರ್.ಡಿ. ಪಾಟೀಲ್ ಬ್ಲೂಟೂತ್ ಬಳಸಿ ಅಕ್ರಮ ನಡೆಸಿರುವುದು ಬಯಲಾಗಿದೆ. ಆಗ ಯಾವುದೇ ಸೂಕ್ತ ಸಾಕ್ಷಿ ಪೊಲೀಸರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಬಚಾವ್ ಆಗಿದ್ದರು. ಆದರೆ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದರ ಸಾಕ್ಷ್ಯಳು ಸಿಐಡಿಗೆ ಲಭಿಸಿವೆ.