Breaking News

“ಸಿದ್ದರಾಮಯ್ಯನವರು ಈ ರಾಜ್ಯದ ಮಾಸ್ ಲೀಡರ್, ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲವನ್ನು ಕಾಣುತ್ತಾರೆ.

Spread the love

ಚುನಾವಣಾ ವರ್ಷಕ್ಕೂ ಮುನ್ನವೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ/ಚರ್ಚೆ ನಡೆಯುತ್ತಲೇ ಇತ್ತು. ಕನಿಷ್ಠ ನಾಲ್ಕರಿಂದ ಐದು ಕ್ಷೇತ್ರದ ಹೆಸರು ಮುನ್ನಲೆಗೆ ಬಂದಿತ್ತು.

ಇದಕ್ಕೆ ಪೂರಕ ಎನ್ನುವಂತೆ ಎಲ್ಲೂ ಈ ಸುದ್ದಿಗಳಿಗೆ ಖಡಾಖಂಡಿತ ಬ್ರೇಕ್ ಹಾಕುವ ಕೆಲಸವನ್ನು ಸಿದ್ದರಾಮಯ್ಯನವರೂ ಮಾಡಿರಲಿಲ್ಲ.

ಚಾಮರಾಜಪೇಟೆಯಿಂದ ಸಿದ್ದರಾಮಯ್ಯನವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಸಾಗಿತು.

ಇದರ ನಡುವೆ, ಹಾಲೀ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡನವರು ಸಿದ್ದರಾಮಯ್ಯನವರಿಗೆ ಆಪ್ತರಾಗುತ್ತಿದ್ದಂತೆಯೇ, ಆ ಕ್ಷೇತ್ರದಿಂದಲೂ ಸಿದ್ದರಾಮಯ್ಯನವರ ಹೆಸರು ಕೇಳಿ ಬರಲಾರಂಭಿಸಿತು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸೋತ ನಂತರ ಹಲವು ಬಾರಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ನೋವನ್ನು ಹೊರಹಾಕಿದ್ದರು.

ಈಗ, ಮತ್ತಿಬ್ಬರು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ದರಾಗಿದ್ದಾರೆ. ಹಾಗಾಗಿ, ಕ್ಷೇತ್ರ ಬಿಟ್ಟು ಕೊಡಲು ಸಿದ್ದರಿರುವ ಸಂಖ್ಯೆ ಏರುತ್ತಲೇ ಇದೆ. ಆದರೆ, ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎನ್ನುವುದಕ್ಕೆ ಉತ್ತರ ಸದ್ಯಕ್ಕಂತೂ ಸಿಗಲಿಕ್ಕಿಲ್ಲ. ಕ್ಷೇತ್ರ ತ್ಯಾಗಕ್ಕೆ ಸಿದ್ದರಾದ ಇಬ್ಬರು ಕಾಂಗ್ರೆಸ್ ಶಾಸಕರು ಯಾರು?

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ

ಸಿದ್ದರಾಮಯ್ಯನವರು ಬಯಸಿದರೆ, ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟು ಕೊಡಲು ಸಿದ್ದ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ “ಕೊಪ್ಪಳ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಬಯಸಿದರೆ, ಆಯಾಯ ಕ್ಷೇತ್ರದ ಹಾಲೀ ಶಾಸಕರ ಮನವೊಲಿಕೆಯನ್ನು ಮಾಡುತ್ತೇವೆ. ಸ್ವತಃ ನಾನು ಕೂಡಾ ಕ್ಷೇತ್ರ ಬಿಟ್ಟು ಕೊಡಲು ಸಿದ್ದ”ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳುವ ಮೂಲಕ, ಸಿದ್ದರಾಮಯ್ಯನವರ ಮೇಲೆ ನಿಯತ್ತು ಮುಂದುವರಿಸಿದ್ದಾರೆ. (ಚಿತ್ರದಲ್ಲಿ: ರಾಘವೇಂದ್ರ ಹಿಟ್ನಾಳ)

ಕುಷ್ಟಗಿಯಲ್ಲಿ ಸಂವಿಧಾನ ಉಳಿಸಿ, ಸಂವಿಧಾನ ರಕ್ಷಣೆ ಕಾರ್ಯಕ್ರಮ

ಇದೇ ಭಾನುವಾರ (ಏಪ್ರಿಲ್ 24) ಕುಷ್ಟಗಿಯಲ್ಲಿ ಸಂವಿಧಾನ ಉಳಿಸಿ, ಸಂವಿಧಾನ ರಕ್ಷಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಆದಿಯಾಗಿ ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ ಆದಿಯಾಗಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇದರ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಜಿಲ್ಲೆಯ ಶಾಸಕರು ಸಿದ್ದರಾಮಯ್ಯನವರಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ದ ಎನ್ನುವ ಮಾತನ್ನಾಡಿದ್ದಾರೆ. (ಚಿತ್ರದಲ್ಲಿ: ಅಮರೇಗೌಡ ಬಯ್ಯಾಪುರ)

ಸಿದ್ದರಾಮಯ್ಯನವರು ಈ ರಾಜ್ಯದ ಮಾಸ್ ಲೀಡರ್

“ಸಿದ್ದರಾಮಯ್ಯನವರು ಈ ರಾಜ್ಯದ ಮಾಸ್ ಲೀಡರ್, ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲವನ್ನು ಕಾಣುತ್ತಾರೆ. ಕಾಂಗೆಸ್ಸಿನಲ್ಲಿ ಇಂತಹ ವರ್ಚಸ್ಸು, ಶಕ್ತಿ ಇರುವ ನಾಯಕರೆಂದರೆ ಅದು ಸಿದ್ದರಾಮಯ್ಯ. ಅವರನ್ನು ಬೆಟ್ಟರೆ ಬೇರೆ ಯಾರಿಗೂ ಈ ಶಕ್ತಿ ಇಲ್ಲ. ಕೊಪ್ಪಳ ಕ್ಷೇತ್ರಕ್ಕೆ ಬಂದರೇ ನಾನು ಕ್ಷೇತ್ರ ಬಿಟ್ಟು ಕೊಡಲು ಸಿದ್ದನಿರುವುದಷ್ಟೇ ಅಲ್ಲ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಕೆಲಸ ಮಾಡುತ್ತೇನೆ” ಎಂದು ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

ಚಾಮರಾಜಪೇಟೆ ಕ್ಷೇತ್ರವನ್ನು ನಾನು ಸಿದ್ದರಾಮಯ್ಯನವರಿಗೆ ಬಿಟ್ಟು ಕೊಡುತ್ತೇನೆ

ಚಾಮುಂಡೇಶ್ವರಿ, ಚಾಮರಾಜಪೇಟೆ, ಹುಣಸೂರು, ಕೋಲಾರ, ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹೊಸದೇನಲ್ಲ. ಈ ಪಟ್ಟಿಗೆ ಈಗ ಮತ್ತೆರಡು ಕ್ಷೇತ್ರಗಳು ಸೇರ್ಪಡೆಯಾಗಿದೆ. ಬಾದಾಮಿ ಜನರು ಒಳ್ಳೆಯವರು, ಆದರೆ ಕ್ಷೇತ್ರ ಬೆಂಗಳೂರಿನಿಂದ ಬಲು ದೂರ ಎನ್ನುವ ಮಾತನ್ನು ಸಿದ್ದರಾಮಯ್ಯ ಆಡಿದ್ದರು.

ಇನ್ನು, “ಚಾಮರಾಜಪೇಟೆ ಕ್ಷೇತ್ರವನ್ನು ನಾನು ಸಿದ್ದರಾಮಯ್ಯನವರಿಗೆ ಬಿಟ್ಟು ಕೊಡುತ್ತೇನೆ, ಜೊತೆಗೆ, ಐವತ್ತು ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು”ಎಂದು ಜಮೀರ್ ಅಹ್ಮದ್ ಖಾನ್ ಕೂಡಾ ಹೇಳಿದ್ದರು. ಆದರೆ, ಇಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಕೂಡಾ ಸ್ಪಷ್ಟನೆಯನ್ನು ನೀಡಿದ್ದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ