ಬೆಂಗಳೂರು: ಜಮೀನು ಸರ್ವೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಸಲು ಕಂದಾಯ ಇಲಾಖೆ ‘ಸ್ವಾವಲಂಬಿ ಆಯಪ್’ ಪರಿಚಯಿಸಿದೆ. ಈ ಮೂಲಕ ಭೂ ಮಾಲೀಕ ತನ್ನ ಭೂಮಿಯನ್ನು ಸ್ವಯಂ ಸರ್ವೆ ಸಿದ್ಧಪಡಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿದೆ.
ನಾಗರಿಕರು ಪಹಣಿ ಹೊಂದಿರುವ ಜಮೀನಿನಲ್ಲಿ 11ಇ, ಪೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಮಾಡಿಕೊಳ್ಳಲು ಸ್ವಾವಲಂಬಿ ಆಯಪ್ ಬಳಸಿಕೊಳ್ಳಬಹುದು.
ಏಕ ಮಾಲೀಕತ್ವದ ಪಹಣಿ (ಆರ್‌ಟಿಸಿ) ಹೊಂದಿರುವರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ನಕ್ಷೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ತನ್ನ ಜಮೀನಿನಲ್ಲಿ 11ಇ, ಪೋಡಿ, ವಿಭಜನೆ, ಭೂ ಪರಿವರ್ತನೆಗಾಗಿ ತನ್ನದೇ ಸ್ವಂತ ಸ್ಕೆಚ್‌ಗಳನ್ನು ಮಾಡಿಕೊಳ್ಳಲು ಸಂಪೂರ್ಣ ಸ್ವತಂತ್ರನಾಗಿರುತ್ತಾನೆ.
ಮೋಜಣಿ ವ್ಯವಸ್ಥೆಯಡಿ ಇ-ಸಹಿ ಅಥವಾ ಆಧಾರ್ ಕೆವೈಸಿ ಪ್ರಕ್ರಿಯೆಯನ್ನು ಬಳಸಿಕೊಂಡು ತನ್ನ ಗುರುತನ್ನು ದೃಢೀಕರಿಸಿ ಅರ್ಜಿ ಸಲ್ಲಿಸಬೇಕು. ಈ ವೇಳೆ ಮೊಬೈಲ್ಫೋನ್ ಸಂಖ್ಯೆ ಕಡ್ಡಾಯವಾಗಿರುತ್ತದೆ.
ಬಹುಮಾಲೀಕತ್ವದ ಪಹಣಿಯ ಹಕ್ಕುದಾರರಲ್ಲಿ ಒಬ್ಬ ಹಕ್ಕುದಾರರು ಸ್ಕೆಚ್ ಕೋರಿ ಮೋಜಿಣಿ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲಿಗೆ ಪೋಡಿ ಅರ್ಜಿಯನ್ನು ಪರಿಗಣಿಸಲಾಗುವುದು. ಪೋಡಿ ಕೆಲಸ ಪೂರೈಸಿ ಆನಂತರ ಮೇಲಿನ ಅರ್ಜಿಯಂತೆ ನಕ್ಷೆ ಒದಗಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿಗೆ ನಕ್ಷೆ ಮತ್ತು ಪಹಣಿ ಒದಗಿಸಿ ಉಳಿದವರಿಗೆ ಉಳಿದ ಜಮೀನನನ್ನು ಜಂಟಿಯಾಗಿ ಉಲ್ಲೇಖಿಸಲಾಗುತ್ತದೆ.
ಅರ್ಜಿದಾರನ ಹೆಸರು ಮತ್ತು ಪಹಣಿಯಲ್ಲಿನ ಹೆಸರಿನ ನಡುವೆ ವ್ಯತ್ಯಾಸ ಇದ್ದರೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ನೋಟಿಸ್ ನೀಡಲಿದ್ದಾರೆ. ಅವರ ಮುಂದೆ ಹಾಜರಾಗಿ ಅರ್ಜಿದಾರರು ಮತ್ತು ಪಹಣಿದಾರರು ಒಂದೇ ಎಂದು ದಾಖಲೆ ಒದಗಿಸಿ ಗುರುತು ದೃಢೀಕರಿಸಬೇಕು. ಇಲ್ಲವಾದರೆ, ಅರ್ಜಿ ವಜಾ ಆಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಿಂಗಳಿಗೆ 1 ಲಕ್ಷ ಅರ್ಜಿ: ನಾಗರಿಕರು ಭೂಮಿಯ ಸ್ಕೆಚ್‌ಗಳಿಗಾಗಿ ಸಲ್ಲಿಸುವ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವಾ ಪರವಾನಗಿ ಭೂಮಾಪಕರುಗಳಿಂದ ತಯಾರಿಸಲಾಗುತ್ತಿತ್ತು. ಆದರೆ, ಸರ್ಕಾರಿ ಮತ್ತು ಪರವಾನಗಿ ಭೂಮಾಪಕರ ಸಂಖ್ಯೆ ಸೀಮಿತವಾಗಿದ್ದು, ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬರುತ್ತಿವೆ. ಇದರ ಜತೆಗೆ 6 ಲಕ್ಷಕ್ಕೂ ಅಧಿಕ ಅರ್ಜಿಗಳು ಅಳತೆಗಾಗಿ ಕಾಯುತ್ತಿವೆ. ಇದರಿಂದಾಗಿ ನಾಗರಿಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಕೊಳ್ಳಲು ಅಗತ್ಯ ಸ್ಕೆಚ್‌ಗಾಗಿ ಹಲವಾರು ತಿಂಗಳುಗಳು ಮತ್ತು ಕೆಲವೊಮ್ಮೆ ವರ್ಷದವರೆಗೆ ಕಾಯಬೇಕಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರ ಹೊಸ ಸೇವೆ ಪರಿಚಯಿಸಿದೆ.
ನಾಗರಿಕರ ಅನುಕೂಲಕ್ಕಾಗಿ ‘ಸ್ವಾವಲಂಬಿ ಆಯಪ್’ ಅಭಿವೃದ್ಧಿಪಡಿಸಿದ್ದು, ತಮ್ಮ ಜಮೀನಿನನ್ನು ಸ್ವಯಂ ಸರ್ವೇ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
| ಆರ್. ಅಶೋಕ್ ಕಂದಾಯ ಇಲಾಖೆ ಸಚಿವ