ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಹಾಗೂ ನಂತರದ ವದಂತಿಗಳಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅದರಲ್ಲೂ ಜವಳಿ ವ್ಯಾಪಾರದ ಮೇಲೆ ಮಂಕು ಕವಿದಿದೆ.
ಮದುವೆ, ಶುಭ ಸಮಾರಂಭಗಳಿಗೆ ಜವಳಿ ಖರೀದಿಸಬೇಕಾದ ಜನರು ಬೇರೆ ನಗರದತ್ತ ಮುಖ ಮಾಡಿದ್ದು, ಹಿಂದಿನ ಮತೀಯ ಗಲಭೆ, ಗಲಾಟೆಗಳಿಂದ ಇಂದಿಗೂ ವಾಣಿಜ್ಯ ನಗರಿ ಎಂದು ಸೂಕ್ಷ್ಮ ಪ್ರದೇಶ ಎನ್ನುವ ಭಾವನೆ ಮರುಕಳಿಸಿದೆ.
ಸುತ್ತಲಿನ ನಾಲ್ಕೈದು ಜಿಲ್ಲೆಯ ಜನರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜವಳಿ ಖರೀದಿಯ ಕೇಂದ್ರ. ಇದೀಗ ಏ.20 ರಿಂದ ಮೇ 25 ರವರೆಗೆ ಮುಹೂರ್ತಗಳಿರುವ ಕಾರಣ ಜವಳಿ ಮಾಡುವ ಸಂದರ್ಭವಿದು. ಹೀಗಿರುವಾಗ ನಗರದಲ್ಲಿ ನಡೆದ ಗಲಾಟೆ ಹಿಂದಿನ ಜನರಲ್ಲಿ ಭೀತಿ ಮೂಡಿಸಿದೆ. ಇದರಿಂದಾಗಿ ಕಳೆದ ಐದು ದಿನಗಳಿಂದ ಜವಳಿ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದೆ. ಹೊರ ಜಿಲ್ಲೆಗಳಿಂದ ಬರುವವರು ಯಾಕೆ ಒಣ ರಿಸ್ಕ್ ಎಂದು ಅಕ್ಕಪಕ್ಕದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಎಲ್ಲವೂ ಮರೆತು ಒಂದಾಗಿ ಹೋಗುತ್ತಿರುವ ಸಂದರ್ಭದಲ್ಲಿ ಈ ಗಲಾಟೆ ನಗರ ಸೂಕ್ಷ್ಮ ಸ್ಥಳ ಎನ್ನುವುದನ್ನು ಮರುಕಳಿಸುವಂತಾಗಿದೆ.
ಶೇ.40 ವ್ಯಾಪಾರ ಕುಸಿತ: ಹುಬ್ಬಳ್ಳಿಯಲ್ಲಿ ಸರಿ ಸುಮಾರು 200 ಚಿಲ್ಲರೆ ಹಾಗೂ 100 ಸಗಟು ಜವಳಿ ವ್ಯಾಪಾರ ಅಂಗಡಿಗಳಿವೆ. ಪ್ರಮುಖವಾಗಿ ಶೇ. 40-50 ರಷ್ಟು ವ್ಯಾಪಾರ ಆಗುವುದು ಈ ಮದುವೆ ಸೀಸನ್‌ನಲ್ಲಿ. ನಾಲ್ಕೈದು ಜಿಲ್ಲೆ ಸೇರಿದಂತೆ ಕೊಲ್ಲಾಪುರ, ಗೋವಾದವರೆಗೂ ಇಲ್ಲಿನ ಜವಳಿ ವ್ಯಾಪಾರ ವಿಸ್ತಾರ ಗೊಂಡಿದೆ. ಆದರೆ ಗಲಾಟೆ ನಂತರದಲ್ಲಿ ಹುಬ್ಬಳ್ಳಿಯತ್ತ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಇತರೆ ನಗರಗಳತ್ತ ಜನರು ಮುಖ ಮಾಡಿದ್ದಾರೆ. ಗಲಭೆಯ ನಂತರದಲ್ಲಿ ಸುಮಾರು ಶೇ. 35-40 ವ್ಯಾಪಾರ ಕುಸಿದಿದ್ದು, ಕಳೆದ ಎರಡು ದಿನಗಳಿಂದ ಕೊಂಚ ವ್ಯಾಪಾರ ಚೇತರಿಕೆ ಕಾಣುತ್ತಿದೆ.