ಬೆಂಗಳೂರು- 40% ಕಮೀಷನ್ ಆರೋಪಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪ, ಸಚಿವ ಸ್ಥಾನ ತಲೆದಂಡವಾಗಿರುವ ಬೆನ್ನಲ್ಲೇ ಇದೀಗ ಮತ್ತಿಬ್ಬರು ಸಚಿವರಿಗೆ ಕಂಟಕ ಎದುರಾಗಿದೆ ಎನ್ನಲಾಗುತ್ತಿದೆ.
ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಅವರ ಮೇಲೆ ಇದೇ ಆರೋಪಗಳು ಕೇಳಿಬಂದಿದ್ದು, ಇಲಾಖೆಯಲ್ಲಿ 40% ಕಮೀಷನ್ ಕೊಡದೆ ಯಾವುದೇ ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂಬ ಆರೋಪ ಜಗಜ್ಜಾಹೀರವಾಗಿದೆ.
ಸದ್ಯದಲ್ಲೇ ಗುತ್ತಿಗೆದಾರರು ಇವರಿಬ್ಬರ ವಿರುದ್ಧ ದಾಖಲೆಗಳ ಸಮೇತ ಪತ್ರಿಕಾಗೋಷ್ಟಿ ಕರೆಯಲಿದ್ದಾರೆ ಎಂಬ ಮಾತು ರಾಜಕೀಯ ಪಡೆಸಾಲೆಯಲ್ಲಿ ಕೇಳಿಬರುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ಹೋಗಿತ್ತು. ಪ್ರಧಾನಿಗಳ ಭೇಟಿಗೆ ಅವಕಾಶ ಸಿಕ್ಕರೆ ದೆಹಲಿಯಲ್ಲಿ ಅವರನ್ನು ಭೇಟಿಯಾಗುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು.
ತನಿಖೆ ಮಾಡಿದರೆ ದಾಖಲೆ ನೀಡುತ್ತೇವೆ ಆದರೆ, ಪ್ರಧಾನಿ ಕಾರ್ಯಾಲಯದಿಂದ ಆದೇಶ ಸಿಗದ ಕಾರಣ, ಗುತ್ತಿಗೆದಾರರ ಸಂಘ ಮುಂದಕ್ಕೆ ಹೆಜ್ಜೆ ಇಟ್ಟಿರಲಿಲ್ಲ. ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರ ಕಮೀಷನ್ ಆರೋಪ ಮತ್ತೆ ಮುನ್ನಲೆಗೆ ಬಂದಿದೆ.