ವಿಜಯಪುರ: ಸಚಿವ ಸ್ಥಾನಕ್ಕೆ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಕುತಂತ್ರ ನಡೆದಿದೆ. ಕಾಂಗ್ರೆಸ್ ಪಕ್ಷದ ಮಹಾನಾಯಕನ ಜತೆಗೆ ನಮ್ಮ ಪಕ್ಷದ ಯುವ ನಾಯಕನೊಬ್ಬ ಸೇರಿ ಕುತಂತ್ರ ಹಣೆದಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜಕೀಯವಾಗಿ ಹತಾಶರಾಗಿರುವ ಕಾಂಗ್ರೆಸ್ ನಾಯಕರು ಇಂಥ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಯಲ್ಲಿ ಸತ್ಯವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಕಲಿ ಸಿ.ಡಿ., ಎಡಿಟ್ ಸಿ.ಡಿ. ರೂಪಿಸುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲೂ ಸಕ್ರಿಯ ತಂಡಗಳಿವೆ. ಎರಡೂ ಪಕ್ಷಗಳಲ್ಲಿ ಈ ನಾಯಕರ ನಕಲಿ ಸಿ.ಡಿ ತಯಾರಿಕೆ ಫ್ಯಾಕ್ಟರಿಯೇ ಇವೆ. ಬೆಂಗಳೂರಿನಲ್ಲಿ ಇಂಥ ಸಿ.ಡಿ ಗಳನ್ನು ಇಟ್ಡುಕೊಂಡು ಬ್ಲ್ಯಾಕ್ ಮೇಲ್ ಮಾಡುವಲ್ಲಿ ಈ ತಂಡಗಳು ಸಕ್ರಿಯವಾಗಿವೆ. ಈಶ್ವರಪ್ಪ ಪ್ರಕರಣದಲ್ಲೂ ಈ ಎರಡೂ ತಂಡಗಳ ಕೈವಾಡವಿದೆ ಎಂದು ಆರೋಪಿಸಿದರು.