ಬೆಂಗಳೂರು: ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಭಯೋತ್ಪಾದಕರಿಗೂ, ಇವರಿಗೂ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯ & ಪರಮ ಕಿರಾತಕ ಕೃತ್ಯ. ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಭಯೋತ್ಪಾದಕರಿಗೂ, ಶಾಂತಿ-ಸೌಹಾರ್ದತೆಗೆ ಕಿಚ್ಚಿಡುತ್ತಿರುವ ಈ ಕಿರಾತಕರಿಗೂ ವ್ಯತ್ಯಾಸವೇ ಇಲ್ಲ. ತಿನ್ನುವ ಅನ್ನಕ್ಕೆ ಮಣ್ಣುಹಾಕಿ ಬದುಕಿಗೆ ಬೆಂಕಿ ಇಡುವ ಇಂಥ ಪ್ರವೃತ್ತಿ ಅನಾಗರಿಕ-ಅಸಹ್ಯ. ಕರ್ನಾಟಕವನ್ನು ಈ ದುಷ್ಟರು, ಶಿಲಾಯುಗದತ್ತ ಹಿಮ್ಮೆಟ್ಟಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು; ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
