ಮಂಡ್ಯ: ಯುಗಾದಿ ಹಬ್ಬದ ಮರುದಿನ ಹಲವೆಡೆ ಹೊಸತೊಡಕು ಎಂದು ಆಚರಿಸುತ್ತಾರೆ. ಆ ದಿನ ಭರ್ಜರಿ ಮಾಂಸದಡುಗೆ ಮಾಡಿ ಸವಿಯುತ್ತಾರೆ, ಇನ್ನು ಕೆಲವೆಡೆ ಮೋಜಿಗಾಗಿ ಇಸ್ಪೀಟ್ನಂಥ ಆಟವೂ ನಡೆಯುತ್ತದೆ. ಈ ಮಧ್ಯೆ ರಾಜ್ಯದಲ್ಲಿ ಮಾಂಸಕ್ಕೆ ಸಂಬಂಧಿಸಿದಂತೆ ಹಲಾಲ್-ಜಟ್ಕಾ ಸಂಘರ್ಷ ಉಂಟಾಗಿದ್ದು, ನಾಳೆ ಹೊಸ ತೊಡಕಿಗೆ ಯಾರಿಗೆ ಹೆಚ್ಚು ವ್ಯಾಪಾರ, ಯಾರು ಎಲ್ಲಿ ಮಾಂಸ ಖರೀದಿಸಲಿದ್ದಾರೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.
ಈ ಮಧ್ಯೆ ಮಂಡ್ಯದಲ್ಲಿ ಗುಡ್ಡೆ ಮಾಂಸಕ್ಕೆ ಭರ್ಜರಿ ಬೇಡಿಕೆ ಉಂಟಾಗಿದೆ. ಅದಕ್ಕಾಗಿ ನಾಲ್ಕೈದು ದಿನಗಳ ಮೊದಲೇ ಬುಕಿಂಗ್ ನಡೆಯುತ್ತಿದೆ. ಸಕ್ಕರೆ ನಾಡು ಮಂಡ್ಯದ ಹಳ್ಳಿಹಳ್ಳಿಗಳಲ್ಲೂ ಗುಡ್ಡೆ ಮಾಂಸ ಮಾರಾಟಕ್ಕೆ ಸಜ್ಜಾಗಿದ್ದಾರೆ.
ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಘರ್ಷಣೆ ನಡುವೆಯೂ ಗುಡ್ಡೆ ಮಾಂಸ ಭರ್ಜರಿ ಸದ್ದು ಮಾಡುತ್ತಿದೆ. ಈಗಾಗಲೇ ಕಟ್ ಮಾಡಿ ಗುಡ್ಡೆ ಹಾಕಲಾರಂಭಿಸಿರುವ ವ್ಯಾಪಾರಿಗಳು ಬುಕ್ ಮಾಡಿದವರಿಗೆ ಮೊದಲ ಆದ್ಯತೆ ಎನ್ನಲಾರಂಭಿಸಿದ್ದಾರೆ.