ಕೇಂದ್ರ ಗೃಹ ಸಚಿವ, ರಾಜಕೀಯ ಚಾಣಾಕ್ಷ ಅಮಿತ್ ಶಾ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ. ತುಮಕೂರಿನ ಪ್ರಸಿದ್ದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಆಗಮಿಸಲಿರುವ ಅವರು ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತೋತ್ಸವದ ಹಿನ್ನೆಲೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಿದ್ದಗಂಗಾ ಮಠ… ತ್ರಿವಿಧ ದಾಸೋಹದಿಂದ ಪ್ರಸಿದ್ದಿ ಪಡೆದ ಕ್ಷೇತ್ರ. ಇಂತಹ ಕ್ಷೇತ್ರದ ಮಠಾಧಿಪತಿಗಳಾಗಿದ್ದ ನಡೆದಾಡುವ ದೇವರು ಡಾ. ಶ್ರೀಶಿವಕುಮಾರ ಮಹಾಸ್ವಾಮಿಗಳ 115 ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಏಪ್ರಿಲ್ 1 ರಂದು ಮಠದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮದ ಮುಖ್ಯ ವಿಶೇಷವಂದ್ರೆ ಮುಖ್ಯ ಅತಿಥಿಗಳಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
ಏಪ್ರಿಲ್ 1 ರ ಬೆಳಗ್ಗೆ 10:00 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಧ್ಯಾಹ್ನ 1.30 ರ ವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಆ ಬಳಿಕ ಸಂಜೆ ವಿಜಯ ಪ್ರಕಾಶ್ರಿಂದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇನ್ನು ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ಇರಲಿದೆ ಅಂತ ವಿಜಯೇಂದ್ರ ತಿಳಿಸಿದರು.
ಒಟ್ಟಾರೆ ಕೇಂದ್ರ ಗೃಹ ಸಚಿವರು ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದು ಅದಕ್ಕೂ ಮುಂಚಿತವಾಗಿ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಕೊರೊನಾ ಹಿನ್ನೆಲೆ ಕಳೆದೆರಡು ಬಾರಿ ಸರಳವಾಗಿ ಆಚರಿಸಲಾಗಿದ್ದ ಕಾರ್ಯಕ್ರಮವನ್ನ ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಾಳೆಯಿಂದಲೆ ಕಾರ್ಯಕ್ರಮದ ಸಿದ್ದತೆಯ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಸದ್ಯ ರಾಜ್ಯಕ್ಕೆ ರಾಜಕೀಯ ಚಾಣಾಕ್ಷ ಅಮೀತ್ ಶಾ ಆಗಮನ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.