ಬೆಂಗಳೂರು, ಮಾ. 17: ಜಲ್ಲಿ ಕ್ರಷರ್ ಮಾಲೀಕನಿಂದ ಲಂಚ ಪಡೆದ ಪ್ರಕರಣ ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿ ಧ್ವನಿಸಿತು. ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹೆಸರು ಪ್ರಸ್ತಾಪಿಸದೇ ಜಲ್ಲಿ ಕ್ರಷರ್ ಮಾಲೀಕನಿಂದ ಲಂಚ ಪಡೆದ ಪ್ರಕರಣ ಪ್ರಸ್ತಾಪಿಸಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮ ಯಾಕೆ ಕ್ರಮ ಜರುಗಿಸಿಲ್ಲ ಎಂಬ ಪ್ರಶ್ನೆ ಸದನದಲ್ಲಿ ಎದುರಾಯಿತು.
‘ಜಲ್ಲಿ ಕ್ರಷರ್ ಮಾಲೀಕರಿಂದ ಲಂಚ ಪಡೆದ ಪ್ರಕರಣ ಸಂಬಂಧ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಕೆಳಹಂತದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗಿದೆ. ಜಲ್ಲಿ ಕ್ರಷರ್ ಮಾಲೀಕನಿಂದ ಹಣ ಪಡೆದ ಪ್ರಕರಣದಲ್ಲಿ ಈಗಾಗಲೇ ಕೆಲವರು ಅಮಾನತು ಮಾಡಾಗಿದೆ. ಆದರೆ, ಈ ಪ್ರಕರಣದಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದ ಐಪಿಎಸ್ ಅಧಿಕಾರಿ ವಿರುದ್ಧ ಯಾಕೆ ಕ್ರಮ ಜರುಗಿಸಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಜಲ್ಲಿ ಕ್ರಷರ್ ಮಾಲೀಕನಿಂದ ಲಂಚ ಪಡೆದ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗಿದೆ. ಆದರೆ, ಐಪಿಎಸ್ ಅಧಿಕಾರಿ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ. ಅವರ ಪಾತ್ರವಿಲ್ಲ ಎಂಬುದು ಪ್ರಾಥಮಿಕ ತನಿಖೆ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ ಅವರ ವಿರುದ್ಧ ತನಿಖೆ ಕೈ ಬಿಡಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ನಡುವೆ ಮಧ್ಯ ಪ್ರವೇಶ ಮಾಡಿದ ರವಿ ಕುಮಾರ್, ಐಪಿಎಸ್ ಅಧಿಕಾರಿ ಮೇಲಿನ ಆರೋಪ ಕುರಿತು ಸಾಕ್ಷಿಗಳು ಇವೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಇಷ್ಟಕ್ಕೆ ಈ ವಿಚಾರದ ಚರ್ಚೆ ಅಂತ್ಯಗೊಂಡಿತು.
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿ ಮಂಜುನಾಥ್ ತಮಗೆ ವಂಚನೆ ಮಾಡಿದ ಜಲ್ಲಿ ಕ್ರಷರ್ ಮಾಲೀಕನ ವಿರುದ್ಧ ನೀಡಿದ ದೂರು ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು.