ಬೆಂಗಳೂರು ಗ್ರಾಮಾಂತರ :ಹೆಣ್ಮಕ್ಕಳು ಆಟೋ ಓಡಿಸೋದಾ, ಅದೂ ಮನೆಮನೆಯಿಂದ ಕಸ ತೆಗೆದುಕೊಳ್ಳೋ ಆಟೋಗೆ ಡ್ರೈವರ್ರಾ! ಇಂಥ ಮೂದಲಿಕೆ, ಮುಜುರಗಳಿಗೆಲ್ಲ ಸೆಡ್ಡು ಹೊಡೆದು ಕಸ ಸಂಗ್ರಹಣೆ ಆಟೋವೊಂದಕ್ಕೆ ಚಾಲಕಿಯಾಗಿ ಇದೇ ಮೂದಲಿಗೆ ಜನರಿಂದಲೇ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದಾರೆ ತೂಬಗೆರೆ ಚಂದನಾ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಸ ಸಂಗ್ರಹಣೆ ಆಟೋಗೆ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರವಾಗಿದ್ದಾರೆ.
ತೂಬಗೆರೆಯ ಸ್ತ್ರೀಶಕ್ತಿ ಸಂಘಟನೆ ಸದಸ್ಯೆಯಾಗಿದ್ದ ಚಂದನಾ, ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಪಾಲಕರ ಒತ್ತಾಸೆಯಂತೆ ಮದುವೆಯಾದ ಚಂದನಾ, ಮುಂದಿನ ಓದಿಗೆ ತಿಲಾಂಜಲಿ ಇಟ್ಟರೂ ಉದ್ಯೋಗ ಮಾಡಬೇಕೆಂಬ ಹಂಬಲ ಬಿಡಲಿಲ್ಲ. ಇದಕ್ಕೆ ಒತ್ತಾಸೆಯಾಗಿದ್ದು ತೂಬಗೆರೆ ಸ್ತ್ರೀ ಸಂಘಟನೆ. ತೂಬಗೆರೆ ಪಂಚಾಯಿತಿ ವ್ಯಾಪ್ತಿಯ ಒಣ ಕಸ ಸಂಗ್ರಹಣೆ ಆಟೋಗೆ ಚಾಲಕ ಹುದ್ದೆ ಖಾಲಿ ಇರುವ ವಿಷಯ ತಿಳಿದ ಚಂದನಾ, ಅರ್ಜಿ ಹಾಕಿಯೇ ಬಿಟ್ಟರು. 20 ದಿನ ಆಟೋ ಚಾಲನೆ ತರಬೇತಿ ಪಡೆದು ಪರವಾನಗಿಯನ್ನೂ ಪಡೆದರು. ಪಂಚಾಯಿತಿ ಇವರಿಗೆ ಆಟೋ ಚಾಲಕಿ ವೃತ್ತಿ ಮಾಡಲೂ ನೆರವು ನೀಡಿತು. ಅದರಂತೆ ಚಂದನಾ ಚಾಲಕಿಯಾಗಿ ಆಟೋ ಏರಿ ಹೊರಟೇ ಬಿಟ್ಟರು.