ಪಣಜಿ(ಗೋವಾ): ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂದು ಗೋವಾದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಫೆ.14ರಂದು ಮತದಾನ ನಡೆದಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ ಗೋವಾದಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಗೆ ಕಾಂಗ್ರೆಸ್ ಮುಕ್ತವಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಅವರು, ಬಿಜೆಪಿ ವಿರೋಧಿ ಯಾವುದೇ ಪಕ್ಷ ಮುಂದೆ ಬಂದು ನಮಗೆ ಬೆಂಬಲ ಸೂಚಿಸಿದರೆ, ಅವರೊಂದಿಗೆ ಹೋಗಲು ನಾವು ಸಿದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಮತದಾನೋತ್ತರ ಸಮೀಕ್ಷೆಗಳ ಬಗ್ಗೆಯೂ ಪ್ರಕ್ರಿಯಿಸಿರುವ ದಿನೇಶ್ ಗುಂಡೂರಾವ್, ಅನೇಕ ಬಾರಿ ಮತದಾನೋತ್ತರ ಸಮೀಕ್ಷೆಗಳು ನಿಖರವಾದ ಸ್ಥಾನಗಳ ಭವಿಷ್ಯವನ್ನು ನುಡಿದಿಲ್ಲ. ನಾವು ನಮ್ಮ ಸ್ವಂತ ಬಲದ ಮೇಲೆ ನಮ್ಮ ಚುನಾವಣಾ ಕಾರ್ಯವನ್ನು ಬೇರು ಮಟ್ಟದಲ್ಲಿ ಮಾಡಿದ್ದೇವೆ. ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ನಮಗೆ ವಿಶ್ವಾಸ ಇದೆ. ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಸೇರಿ ಸರ್ಕಾರವನ್ನು ರಚಿಸುತ್ತೇವೆ ಎಂದರು.