ಕಳಸಾ ಬಂಡೂರಿ ಯೋಜನೆ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ

Spread the love

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಗಬೇಕಿದ್ದು, ಅದೀಗ ಅಂತಿಮ ಹಂತದಲ್ಲಿದೆ. ಈ ಕುರಿತು ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮಾತನಾಡಿದ್ದೇನೆ. ಅಧಿವೇಶನದ ನಂತರ ಮತ್ತೊಮ್ಮೆ ಸಚಿವರನ್ನು ಭೇಟಿಯಾಗಲಿದ್ದು, ಯೋಜನೆ ಶೀಘ್ರ ಆರಂಭವಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಅಮರಗೋಳದಲ್ಲಿ ಭಾನುವಾರ ಹುಬ್ಬಳ್ಳಿ ಎಪಿಎಂಸಿ ಪ್ರಾಂಗಣದ ಮಹಾದ್ವಾರ, ಜಾನುವಾರು ಮಾರುಕಟ್ಟೆ, ಹಾಗೂ ಈರುಳ್ಳಿ ಸಂಗ್ರಹಣಾ ಗೋದಾಮು ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿನ 12 ಟಿಎಂಸಿ ಬಳಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಒಟ್ಟಾರೆ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬರಬೇಕಿದೆ. ತೀರ್ಪನ್ನು ಮೂರು ರಾಜ್ಯಗಳು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಮೇಕೆದಾಟು ಯೋಜನೆ ಇವತ್ತಿನದಲ್ಲ. ಕರ್ನಾಟಕ ವಿದ್ಯುತ್ ನಿಗಮವು 1996ರಲ್ಲಿ ಈ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಮುಂದಾಗಿತ್ತು. ಆದರೆ, ಐದು ವರ್ಷಗಳಾದರೂ ಸಿದ್ಧಗೊಂಡಿರಲಿಲ್ಲ. ನಂತರ ಸಿದ್ಧಗೊಂಡಿದ್ದ ಡಿಪಿಆರ್ ಅನ್ನು ಬದಲಿಸುವಂತೆ 2012ರಲ್ಲಿ ನಾನು ಸೂಚಿಸಿದ್ದೆ. ಇದೀಗ ಅಂತಿಮ ಹಂತಕ್ಕೆ ಬಂದಿದೆ. ಕಾಮಗಾರಿಯನ್ನು ಬೇಗ ಆರಂಭಿಸಬೇಕು ಎಂಬ ಉದ್ದೇಶದಿಂದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆಯೇ ಹೊರತು, ಯೋಜನೆಗೆ ಸಂಬಂಧಿಸಿದ ಕಾಂಗ್ರೆಸ್ ಪಾದಯಾತ್ರೆಯ ಒತ್ತಡದಿಂದಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಯಾವುದೇ ನದಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ತನ್ನದೇ ಆದ ಮಾನದಂಡಗಳಿವೆ. ಕೃಷ್ಣಾ ನದಿ ಯೋಜನೆಯನ್ನು ಆ ಮಾನದಂಡಗಳಡಿ ತರಲು ಅಗತ್ಯವಿರುವ ತಾಂತ್ರಿಕ ಕಾರ್ಯಗಳನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಳಿಕ, ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು‌. ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದ ಯೋಜನೆಯು ಇಲಾಖೆಯ ಅನುದಾನದಲ್ಲಿ ಜಾರಿಯಾಗಲಿದೆ. ಅದಕ್ಕೆ ಬೇಕಾದ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ