ಶಿಕ್ಷಕರ ವಿರುದ್ಧ 8 ವರ್ಷದ ಬಾಲಕನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಅಪರೂಪದ ಪ್ರಸಂಗ ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯ ಬಯ್ಯಾಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಠಾಣೆಗೆ ಅಳುತ್ತಾ ಬಂದ ಬಾಲಕನನ್ನು ಪೊಲೀಸರು ಪ್ರಶ್ನಿಸಿದಾಗ, ಬಾಲಕ ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ವಿವರಣೆಗೆ ಬರುವುದಾದರೆ, ಅನಿಲ್ ಹೆಸರಿನ ಬಾಲಕ ಬಯ್ಯಾರಾಮ್ ಮಂಡಲದ ಖಾಸಗಿ ಶಾಲೆಯೊಂದರಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿದ ಬಾಲಕ, ತನ್ನ ಶಾಲಾ ಶಿಕ್ಷಕರಾದ ಸನ್ನಿ ಮತ್ತು ವೆಂಕಟ್ ವಿರುದ್ಧ ದೂರು ಸ್ವೀಕರಿಸಿ ಕ್ರಮ ಜರುಗಿಸುವಂತೆ ಪೊಲೀಸರನ್ನು ಕೇಳಿದ್ದಾನೆ. ಈ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಕೊಂಚವೂ ಹೆದರದೆ ಆತ ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಇದಾದ ಬಳಿಕ ಬಾಲಕನನ್ನು ಶಾಲೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ತನಗೆ ಹೊಡೆದ ಶಿಕ್ಷಕರನ್ನು ಬಾಲಕ ತೋರಿಸಿದ್ದಾನೆ. ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರು ಶಿಸ್ತುಮರೆತಿದ್ದು, ಅವರಿಗೆ ಪೊಲೀಸರು ಸಮಾಲೋಚನೆ ನೀಡಿದರು.’ ಇನ್ನೊಮ್ಮೆ ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳುವಂತೆ ಶಿಕ್ಷಕರಿಗೆ ತಿಳಿ ಹೇಳಿದರು.
ಪುಟ್ಟ ವಯಸ್ಸಿನಲ್ಲಿಮ ದೂರು ಕೊಡಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಬಾಲಕನ ಧೈರ್ಯವನ್ನು ಪೊಲೀಸರು ಮೆಚ್ಚಿಕೊಂಡರು. ಅಲ್ಲದೆ, ಠಾಣೆಗೆ ಆಗಮಿಸುವಾಗ ಮಾಸ್ಕ್ ಧರಿಸಿ ಕರೊನಾ ನಿಯಮಗಳನ್ನು ಪಾಲಿಸಿದ ರೀತಿಯು ಇಷ್ಟವಾಗಿದೆ. ಇದೀಗ ಈ ಘಟನೆ ಮೆಹಬೂಬಬಾದ್ ಜಿಲ್ಲೆ ಭಾರೀ ಚರ್ಚೆಯ ವಿಷಯವಾಗಿದೆ. ಶಿಕ್ಷಕರು ಹೊಡೆದರೆ ಅಳುತ್ತಾ ಮನೆಗೆ ಹೋಗುತ್ತಿರುವ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ, ಪೊಲೀಸ್ ಠಾಣೆಗೆ ಹೋಗಿ ಈ ರೀತಿ ದೂರು ನೀಡುವುದು ಹಾಸ್ಯಾಸ್ಪದ ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ
Laxmi News 24×7