Breaking News

ಪುನೀತ್ ಹೆಸರಿನ ‘ವಿದ್ಯಾರ್ಥಿ ಉಪಗ್ರಹ ಉಡಾವಣೆ’ ಯೋಜನೆಗೆ ಅಶ್ವತ್ಥನಾರಾಯಣ ಚಾಲನೆ

Spread the love

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಸುಮಾರು ₹ 1.90 ಕೋಟಿ ವೆಚ್ಚದ ‘ವಿದ್ಯಾರ್ಥಿ ಉಪಗ್ರಹ ಉಡಾವಣೆ’ ಯೋಜನೆಗೆ ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಸೋಮವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.

ಈ ವಿದ್ಯಾರ್ಥಿ ಉಪಗ್ರಹಕ್ಕೆ ನಟ ಪುನೀತ್‌ ರಾಜಕುಮಾರ್‌ ಹೆಸರಿಡಲಾಗಿದೆ.

ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಸಂದರ್ಭದಲ್ಲಿ ಸಚಿವರು ಈ ವಿನೂತನ ಪರಿಕಲ್ಪನೆಯ ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಶ್ವತ್ಥನಾರಾಯಣ, ‘ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಉಪಗ್ರಹವನ್ನು ಸೆಪ್ಟೆಂಬರ್-ಅಕ್ಟೋಬರ್‌ ತಿಂಗಳಲ್ಲಿ ಉಡಾವಣೆ ಮಾಡಲು ತೀರ್ಮಾನಿಸಿದ್ದೇವೆ. ಉಪಗ್ರಹಕ್ಕೆ ಯುವಕರ ಕಣ್ಮಣಿಯಾಗಿದ್ದ ನಟ ಪುನೀತ್‌ ರಾಜಕುಮಾರ್‌ ಹೆಸರಿಡಬೇಕು ಎಂಬ ಸಲಹೆ ಬಂದಿತ್ತು. ಹೀಗಾಗಿ, ಅವರ ಹೆಸರಿಡಲಾಗಿದೆ. ಈ ಯೋಜನೆಯಡಿ 20 ಶಾಲೆಗಳ ಮಕ್ಕಳು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸಾಮಾನ್ಯ ಉಪಗ್ರಹ ಅಭಿವೃದ್ಧಿಪಡಿಸಲು ₹ 50 ಕೋಟಿಯಿಂದ ₹ 60 ಕೋಟಿ ವೆಚ್ಚ ತಗಲುತ್ತದೆ. ಅಲ್ಲದೆ, ಅದರ ತೂಕ ಕೂಡಾ 50 ಕಿಲೋ ಇರುತ್ತದೆ. ಆದರೆ, ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ, ಪರಿವರ್ತನೆ ಆಗಿದೆ. ಇಲ್ಲಿ ಒಂದೂವರೆ ಕಿಲೋ ತೂಕದಲ್ಲಿ ₹ 1.90 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ಉಪಗ್ರಹ ಉಡಾವಣೆ ಯೋಜನೆಯ ಪರಿಕಲ್ಪನೆ ರೂಪಿಸಲಾಗಿದೆ’ ಎಂದು ಅವರು ವಿವರಿಸಿದರು.

‘ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವಿಜ್ಞಾನ ವಿಷಯದಲ್ಲಿ ಬದ್ಧತೆ, ಕಾಳಜಿ ತೋರಿಸಬೇಕಾದುದು ಬಹಳ ಮುಖ್ಯ. 20ನೇ ಶತಮಾನದಲ್ಲಿ ವಿಜ್ಞಾನ ಬಹಳ ಪ್ರಮುಖ ಪಾತ್ರ ವಹಿಸಿದೆ. ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಾಣುತ್ತೇವೆ. ಹೊಸ ಹೊಸ ಆವಿಷ್ಕಾರಗಳಿಂದ ಸಮಾಜ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ವಿಜ್ಞಾನದ ಪ್ರಯೋಜನ ಎಲ್ಲರಿಗೂ ಸಿಗಬೇಕು. ಆದರೆ, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನಮಗೆ ಸಾಧ್ಯ ಆಗಿಲ್ಲ’ ಎಂದು ಸಚಿವರು ವಿಷಾದಿಸಿದರು.

‘ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯೋಜನೆಗಳನ್ನು ರೂಪಿಸಿದೆ. ವಿಜ್ಞಾನ ಮೂಲ ವಿಷಯ. ಎಲ್ಲದಕ್ಕೂ ಮೂಲ ಗಣಿತ. ಗಣಿತವನ್ನು ಸರಿಯಾಗಿ ಕಲಿಯಬೇಕು. ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಂತದಲ್ಲಿಯೇ ವಿಜ್ಞಾನ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ’ ಎಂದರು.


ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಗಂಗಾನಗರ ಇಲ್ಲಿನ ಶಾಲಾ ಆವರಣದಲ್ಲಿ, 2021 – 22 ನೇ ಸಾಲಿನ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಡಿ.ವಿ. ಸದಾನಂದ ಗೌಡ, ‘ಈ ದಿನ ಹೊಸ ಭಾರತ ನಿರ್ಮಾಣಕ್ಕೆ ಹೊಸತನ ಕೊಡುವ ದಿನ. ವಿಜ್ಞಾನದ ಬಗ್ಗೆ ಎಳೆಯ ಮಕ್ಕಳಲ್ಲಿ ಅರಿವು ಮೂಡಿಸುವ ದಿನ. ಹಿಂದೆ ಜೀವನೋಪಾಯಕ್ಕಾಗಿ ಶಿಕ್ಷಣ ಕೊಡುವ ವ್ಯವಸ್ಥೆ ಇತ್ತು. ಅದೇ ದೊಡ್ಡ ಸಾಧನೆ ಎಂಬಂತಿತ್ತು. ಈಗ ಜಗತ್ತು ಬದಲಾವಣೆ ಆಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಾಧನೆ ಆಗಬೇಕಿದೆ’ ಎಂದರು.

‘ಹೊಸತನದಿಂದ ಹೊಸ ಆವಿಷ್ಕಾರ ಸಾಧ್ಯ. ಆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರೊ. ಸಿ.ವಿ. ರಾಮನ್‌ ಅವರು ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದ್ದರು. ವಿಜ್ಞಾನಕ್ಕೆ ಹೊಸ ದಿಕ್ಕು ನೀಡಿದ್ದರು. ಹೊಸತನದ ಹುಡುಕಾಟದ ಕಡೆಗೆ ನಾವು ಹೋಗಲೇಬೇಕು. ಹೊಸ ಆವಿಷ್ಕಾರ ಬರಬೇಕಿದ್ದರೆ ಅದರ ಮೂಲ ಎಲ್ಲಿದೆ ಎಂಬ ಹುಡುಕಾಟ ನಡೆಯಬೇಕು. ಆ ಕೆಲಸ ಮಾಡುವಂಥ ಪ್ರಯತ್ನಗಳು ಆದಾಗ, ಮಾತ್ರ ಹೊಸತನ ಸಾಧ್ಯ ಆಗಲಿದೆ. ಯುವ ಪೀಳಿಗೆಯಲ್ಲಿ ಕೆಳಹಂತದಿಂದಲೇ, ಕುತೂಹಲ ಮೂಡಿಸುವ ಕೆಲಸ ಆಗಬೇಕು’ ಎಂದರು.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ