ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ (BY Vijayendra) ಪಕ್ಷ ಹಾಗೂ ಸರ್ಕಾರದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Bsanagouda Patil Yatnal) ವ್ಯಂಗ್ಯವಾಡಿದ್ದಾರೆ.
ಅಧಿಕಾರ ಸಿಗುತ್ತದೆ ಎಂಬ ಆಸೆಯೊಂದಿಗೆ ಯಾರೆಲ್ಲಾ ಕೋಟ್ ಹೊಲಿಸಿಕೊಂಡಿದ್ದಾರೋ ಗೊತ್ತಿಲ್ಲ. ಬಿಜೆಪಿಯಿಂದ (BJP) ಬಹಳ ಜನ ಹೋಗ್ತಾರೆ ಎಂಬ ಮಾತು ಕೇಳಿಬಂದಿದ್ದು ಒಳ್ಳೇದಾಯ್ತು. ಸಚಿವ ಸೋಮಶೇಖರ್ ಸೇರಿ ಹಲವರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದರು. ಮಾಧ್ಯಮಗಳು ಅದೇ ಹೇಳಿಕೆಯನ್ನು ತೋರಿಸಿ, ಪಕ್ಷವನ್ನು ಗಟ್ಟಿ ಮಾಡುತ್ತಿವೆ ಎಂದರು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಯಾರೂ ಅನಿವಾರ್ಯ ಅಲ್ಲ. ಬಿಜೆಪಿ ಮತ್ತೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಕುಸ್ತಿ ಇರೋದು ಡಿ.ಕೆ.ಶಿವಕುಮಾರ್ ಮೇಲೆಯೇ ಹೊರತು ನಮ್ಮ ಮೇಲೆ ಅಲ್ಲ ಎಂದು ಹೇಳಿದರು.
ಪ್ರಸ್ತುತ ಕಾಂಗ್ರೆಸ್ನಲ್ಲಿರುವ ಸಿ.ಎಂ.ಇಬ್ರಾಹಿಂ ಯಾವಾಗ ಏನು ಮಾತನಾಡುತ್ತಾರೋ ಗೊತ್ತಿಲ್ಲ. ಅವರದ್ದು ಮತ್ತು ಕಾಂಗ್ರೆಸ್ನವರದ್ದು ಏನೇನಿದೆಯೋ ನನಗೆ ಗೊತ್ತಿಲ್ಲ. ಅವರು ಒಮ್ಮೆ ದೇವೇಗೌಡರನ್ನು ಅಪ್ಪ ಎನ್ನುತ್ತಾರೆ, ಇನ್ನೊಮ್ಮೆ ಸಿದ್ದರಾಮಯ್ಯ ಅವರನ್ನು ಅಣ್ಣ ಎನ್ನುತ್ತಾರೆ. ರಾಜಕೀಯದಲ್ಲಿ ಹೀಗೆ ಅಪ್ಪ-ಅಣ್ಣ ಎನ್ನುವವರು ಭಾರೀ ಡೇಂಜರ್ ಎಂದು ಅಭಿಪ್ರಾಯಪಟ್ಟರು.
ಸಚಿವ ಮುರುಗೇಶ್ ನಿರಾಣಿ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್, ನಿರಾಣಿ ಯಾವ ರಾಜ್ಯಕ್ಕೆ ಸಿಎಂ ಆಗ್ತಾರೆ ಪಾಕಿಸ್ತಾನಕ್ಕಾ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾರೆ. ನಿರಾಣಿ ಏನು ಗುರಾಣಿನಾ ಎಂದು ಆಕ್ರೋಶ ವ್ಯಕ್ತಡಿಸಿದರು. ಸಮುದಾಯ ಒಡೆಯುವ ನಿರಾಣಿ ಅವರ ಪ್ರಯತ್ನ ಈಡೇರುವುದಿಲ್ಲ. ಅವರು ಎಂದಿಗೂ ಉದ್ಧಾರ ಆಗಲ್ಲ, ಹೀಗೇ ಮಠಗಳನ್ನು ಕಟ್ಟುತ್ತಿದ್ದರೆ, ಧರ್ಮದ ವಿಚಾರದಲ್ಲಿ ಕೈ ಹಾಕಿದರೆ ರಾಜಕೀಯವಾಗಿ ಅಂತ್ಯವಾಗುತ್ತಾರೆ ಎಂದರು.