ನಾಗಮಂಗಲ: 6 ವರ್ಷದ ಮಗನ ಜತೆ ತಡರಾತ್ರಿ ಕೆರೆಗೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಬೆಳಗ್ಗೆ ಶವಗಳನ್ನು ಹೊರ ತೆಗೆಯುತ್ತಿದ್ದಂತೆ ಈತನ ಪತ್ನಿಯೂ ಕೆರೆಗೆ ಹಾರಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೆಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.
ಸಾವಿಗೂ ಮುನ್ನ ಆತ ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ಪತ್ನಿ ಮತ್ತು ಮತ್ತೊಬ್ಬ ಪುರುಷನ ಹೆಸರಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪಿಟ್ಟೆಕೊಪ್ಪಲು ಗ್ರಾಮದ ಲೇಟ್ ಬೋರೇಗೌಡರ ಮಗ ಗಂಗಾಧರಗೌಡ (36) ಮತ್ತು ಇವರ 6 ವರ್ಷದ ಪುತ್ರ ಜಸ್ಮಿತ್ ಆತ್ಮಹತ್ಯೆ ಮಾಡಿಕೊಂಡವರು. ಗಂಗಾಧರಗೌಡಗೆ ಗಿರೀಶ ಎಂಬ ಮತ್ತೊಂದು ಹೆಸರಿದೆ. ಗುರುವಾರ ತಡರಾತ್ರಿ ಡೆತ್ನೋಟ್ ಬರೆದಿಟ್ಟ ಗಂಗಾಧರಗೌಡ, ಮಗನೊಂದಿಗೆ ಊರಿನ ಸಮೀಪದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ‘ನನ್ನ ಹಾಗೂ ಮಗನ ಸಾವಿಗೆ ನನ್ನ ಪತ್ನಿ ಸಿಂಧು, ಎಲ್ಐಸಿ ಏಜೆಂಟ್ ಜಿ.ಸಿ.ನಂಜುಂಡೇಗೌಡ ಕಾರಣರು. ಇವರಿಬ್ಬರು ಕೊಟ್ಟಿರುವ ತೊಂದರೆಯನ್ನು ಹೇಳಲು ಕಷ್ಟವಾಗುತ್ತದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಗಂಗಾಧರಗೌಡ ಬರೆದಿದ್ದಾರೆ.
ಸಿಂಧು ಹಾಗೂ ಗರುಡಾಪುರದ ಎಲ್ಐಸಿ ಏಜೆಂಟ್ ಜಿ.ಸಿ.ನಂಜುಂಡೇಗೌಡನ ನಡುವೆ ಕೆಲವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ಕುರಿತು ಅನೇಕ ಬಾರಿ ರಾಜಿ, ಸಂಧಾನಗಳು ನಡೆದಿದ್ದವು. ಈ ಇಬ್ಬರ ಮಾನಸಿಕ ಕಿರುಕುಳ ತಡೆಯಲಾರದೆ ಬೇಸತ್ತು ಮಗನೊಂದಿಗೆ ನೀರಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಮೃತನ ಸಹೋದರ ಬಿ.ಪಿ.ಮಂಜುನಾಥ ಪೊಲೀಸರಿಗೆ ದೂರು ನೀಡಿದ್ದಾರೆ.