ಬೆಳಗಾವಿ: ಒಮಿಕ್ರಾನ್ ಸೋಂಕಿತ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೇಣುಕಾ ಯಲ್ಲಮ್ಮ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕಾ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮಹಾರಾಷ್ಟ್ರದಿಂದ ಗಣನೀಯ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಆಗಮಿಸುತ್ತಾರೆ.
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಬಣದ ಹುಣ್ಣಿಮೆ ಜಾತ್ರೆಗೆ ಸುಮಾರು 5ರಿಂದ 8 ಲಕ್ಷದವರೆಗೆ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ. ಹೀಗಾಗಿ, ಜನವರಿ 14ರಿಂದ 28ರವರೆಗೆ ಸವದತ್ತಿ ಯಲ್ಲಮ್ಮ ದೇವಸ್ಥಾನ, ಜೋಗಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ, ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ರಾಯಬಾಗದ ತಾಲೂಕಿನ ಚಿಂಚಲಿ ಮಾಯಕ್ಕಾ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.