ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ.6.45ಕ್ಕೆ ಜಿಗಿತಕಂಡು ಸಂಭಾವ್ಯ ಅನಾಹುತದ ಮುನ್ಸೂಚನೆ ನೀಡಿರುವ ಹೊರತಾಗಿಯೂ ಮೇಕೆದಾಟು ಯೋಜನೆಗಾಗಿ ಜ.9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಡೆಸಿಯೇ ಸಿದ್ಧ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಕೋವಿಡ್ ವ್ಯಾಪಕವಾಗುತ್ತಿರುವ ಹಿನ್ನೆಯಲ್ಲಿ ಸಭೆ, ಸಮಾರಂಭ, ರಾಜಕೀಯ ರ್ಯಾಲಿಗಳಿಗೆ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಬುಧವಾರ ಮಧ್ಯಾಹ್ನ ಕಾಂಗ್ರೆಸ್ ನಾಯಕರು ಸಭೆ ನಡೆಸಿ, ಪಾದಯಾತ್ರೆ ನಿಲ್ಲಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದರು.
ಹಾಗೆಯೇ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ಜನರಿಗೆ ಕರೊನಾ ಬರಬಾರದು ಎಂಬುದು ನಮ್ಮ ಆಶಯ. ಹಾಗಾಗಿ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸಿ ಪಾದಯಾತ್ರೆ ಮಾಡುತ್ತೇವೆ ಎಂದರು. ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ಪಾದಯಾತ್ರೆ ಮಾಡಬಾರದೆಂದು ಷಡ್ಯಂತ್ರ ರೂಪಿಸಿದೆ ಎಂದು ಟೀಕಿಸಿದ ಸಿದ್ದರಾಮಯ್ಯ, ‘ಡಾ.ಸುಧಾಕರ್, ಈಶ್ವರಪ್ಪ ಹೇಳಿದ್ದನ್ನೆಲ್ಲ ಕೇಳೋಕಲ್ಲ ನಾವಿರೋದು. ನಮ್ಮ ಕರ್ತವ್ಯ ಏನು ಎಂದು ನಮಗೆ ಗೊತ್ತು, ಅದನ್ನು ನಾವು ಮಾಡುತ್ತೇವೆ’ ಎಂದು ಹೇಳಿದರು.
ನಾವು ಕಾನೂನು ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನೀರಿಗಾಗಿ ನಡೆಯುತ್ತೇವೆ. ಒಂದು ವೇಳೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡದೆ ಇದ್ದರೆ ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ವಿವಿಧ ಪಟ್ಟಣಗಳ ಮೂಲಕ ಹಾದು ಬರುವ ಪಾದಯಾತ್ರೆ ಬೆಂಗಳೂರಿನಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಕೊನೆಗೆ ಜ.19ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರ್ಯಾಲಿಯೊಂದಿಗೆ ಕೊನೆಗೊಳ್ಳಲಿದೆ. ಈ ಸಂಬಂಧ ಎರಡು ತಿಂಗಳಿಂದ ಪೂರ್ವತಯಾರಿ ನಡೆದಿತ್ತು.