ಬಾಗಲಕೋಟೆ: ಡಿ.27ರಂದು ನಡೆದ ಕಮತಗಿ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು(ಡಿ.30) ಪ್ರಕಟವಾಗಿದ್ದು, ದಂಪತಿ ಇಬ್ಬರೂ ಆಯ್ಕೆಯಾಗುವ ಮೂಲಕ ಗಮನ ಸೆಳೆಸಿದ್ದಾರೆ.
7ನೇ ವಾರ್ಡ್ನಿಂದ ದೇವಿಪ್ರಸಾದ ನಿಂಬಲಗುಂದಿ ಹಾಗೂ ಇವರ ಪತ್ನಿ ನೇತ್ರವಾತಿ 15ನೇ ವಾರ್ಡ್ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು.
ನೇತ್ರಾವತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದರು. ದೇವಿಪ್ರಸಾದಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಅಖಾಡಕ್ಕೆ ಇಳಿದಿದ್ದರು. ಪತಿ ಮತ್ತು ಪತ್ನಿ ಇಬ್ಬರಿಗೂ ಮತದಾರರು ಜೈ ಎಂದಿದ್ದಾರೆ.
ನೇತ್ರಾವತಿ 441 ಮತ ಪಡೆದು 177 ಮತಗಳ ಅಂತರದಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ದೇವಿಪ್ರಸಾದ 148 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಒಟ್ಟು 16 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಸ್ಥಾನ ಪಡೆದಿದ್ದು, ಇದೀಗ ಪಕ್ಷೇತರ ಅಭ್ಯರ್ಥಿ ದೇವಿಪ್ರಸಾದ ಸಹ ಕಾಂಗ್ರೆಸ್ ಬೆಂಬಲಿಸಲಿದ್ದಾರೆ.