ಬೆಳಗಾವಿ: ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ವಿರೋಧ ಕಟ್ಟಿಕೊಂಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಲು ಹೋದಾಗ ಅವರನ್ನು ತಡೆದ ರಮೇಶ್ ಕುಮಾರ್, ‘ಹೋಗ್ರಿ, ನನ್ನನ್ನೇಕೆ ಮಾತನಾಡಿಸುವಿರಿ?
ಜೀವಂತ ಇರೋರನ್ನು ಮಾತಾಡಿಸಿ, ನಾನು ಜೀವಂತ ಇಲ್ಲ. ನಾಲ್ಕು ದಿನಗಳ ಹಿಂದೆಯೇ ನಾನು ಸತ್ತು ಹೋಗಿದ್ದೇನೆ’ ಎಂದು ಆಕ್ರೋಶದಿಂದ ಹೇಳಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕನ್ನಡಿಗರ ಮೇಲೆ ಮಾಡುತ್ತಿರುವ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ಕೇಳಲು ಹೋದಾಗ ರಮೇಶ್ ಕುಮಾರ್ ಮಾತನಾಡದೇ ಈ ರೀತಿ ಉತ್ತರಿಸಿದ್ದಾರೆ. ಪ್ರಶ್ನಿ ಕೇಳಲು ಅವರ ಬಳಿ ಮಾಧ್ಯಮ ಪ್ರತಿನಿಧಿಗಳು ಮೈಕ್ ಹಿಡಿದಾಗ, ಕೂಡಲೇ ಕೈ ಮುಗಿದು ‘ಜೀವಂತ ಇರೋರನ್ನು ಮಾತಾಡಿಸಿ, ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ. ಸುಮ್ಮನೇ ಸತ್ತವನ ಬಳಿ ಮಾತನಾಡಿಸಬೇಡಿ’ ಎಂದರು.
‘ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ’ ಎಂಬ ಇಂಗ್ಲಿಷ್‌ನ ನುಡಿಗಟ್ಟನ್ನು ಅಧಿವೇಶನದ ವೇಳೆ ಹೇಳಿ ಮಹಿಳಾ ಸಮುದಾಯ ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ರಮೇಶ್. ಕ್ಷಮೆಯಾಚಿಸಿದರು ಕೂಡ ಆ ಬಗ್ಗೆ ವಿರೋಧಗಳು ಹುಟ್ಟುತ್ತಲೇ ಇವೆ. ಅವರ ಹೇಳಿಕೆಯನ್ನು ಪ್ರಸಾರ ಮಾಡಿರುವ ಮಾಧ್ಯಮದವರ ಮೇಲೆ ಇವರೀಗ ಗರಂ ಆಗಿದ್ದಾರೆ.