ಬೆಳಗಾವಿ – ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ನಿಮಿತ್ತ ಬಿಜೆಪಿ ಪ್ರಮುಖರ ಸಭೆ ಖಾಸಗಿ ರೆಸಾರ್ಟ್ ನಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಕುರಿತು ಜಿಲ್ಲಾದ್ಯಂತ ಹಬ್ಬುತ್ತಿರುವ ಸುದ್ದಿಯ ಕುರಿತು ಮನನೊಂದು ಮಾತನಾಡಿದರು.
ರಮೇಶ ಜಾರಕಿಹೊಳಿ ಹಾಂಗ್ ಮಾಡಾಕತ್ತಾರ, ಹಿಂಗ್ ಮಾಡಾಕತ್ತರಾ ಎಂದು ಎಲ್ಲ ಕಡೆ ಸುದ್ದಿ ಹಬ್ಬುತ್ತಿದೆ. ನಾವೆಲ್ಲರೂ ಪ್ರಾಮಾಣಿಕವಾಗಿ ಬಿಜೆಪಿ ಕೆಲಸ ಮಾಡುತ್ತಿದ್ದೇವೆ. ಕೈ ಮುಗಿದು ವಿನಂತಿ ಮಾಡಿಕೊಳ್ತೇನೆ. ಬಿಜೆಪಿಗೆ ಎಲ್ಲರೂ ಪ್ರಾಮಾಣಿಕವಾಗಿ ಮಾಡೋಣ, ಕಾಂಗ್ರೆಸ್ ಸೋಲಿಸೋಣ ಎಂದು ಹೇಳುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ರಮೇಶ ಜಾರಕಿಹೊಳಿ ಲೋಕಸಭಾ ಉಪಚುನಾವಣೆಯಲ್ಲಿ ತನ್ನ ತಮ್ಮನ ವಿರುದ್ಧ ಕೆಲಸ ಮಾಡಿ ಬಿಜೆಪಿಯ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಅವರ ಪ್ರಾಮಾಣಿಕತೆಯ ಬಗ್ಗೆ ಸಂಶಯ ಬೇಡ. ಅವರು ತಮ್ಮ ಕ್ಷೇತ್ರದಲ್ಲಿ 28 ಸಾವಿರ ಲೀಡ್ ಕೊಡದಿದ್ದರೆ ಮಂಗಲಾ ಅಂಗಡಿ ಗೆಲ್ಲುತ್ತಿರಲಿಲ್ಲ. ರಮೇಶ ಜಾರಕಿಹೊಳಿ ಮತ್ತು ಅಭಯ ಪಾಟೀಲ ಇಬ್ಬರ ಕ್ಷೇತ್ರದಲ್ಲೂ ಬಿಜೆಪಿ ಲೀಡ್ ಪಡೆದಿದೆ ಎಂದು ಬಾಲಚಂದ್ರ ನೆನಪಿಸಿದರು.
ಅದೇ ರೆಸಾರ್ಟ್ ನಲ್ಲಿದ್ದರೂ ರಮೇಶ್ ಜಾರಕಿಹೊಳಿ ಸಭೆಗೆ ಆಗಮಿಸಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು,ಪದಾಧಿಕಾರಿಗಳು ಉಪಸ್ಥಿತರಿದ್ದರು.