ಮೈಸೂರು: ರಾಜ್ಯದ ಮೂಲೆ ಮೂಲೆಯಲ್ಲೂ ಜನ ಪ್ರೀತಿ ನೀಡುತ್ತಿದ್ದಾರೆ, ನನಗೆ ರಾಜಕೀಯ ತೃಪ್ತಿ ಇದೆ, ಸಮಾಧಾನ ಇದೆ, ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಸಂಘಟನೆ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಶ್ರೀರಾಜೇಂದ್ರ ಭವನದಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪರ ಮತಯಾಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಸಹೋದ್ಯೋಗಿಗಳಿಗೆ ಸಿಹಿ ಊಟ ನೀಡಿ ಅಲ್ಲಿಂದ ಹೊರಬಂದೆ. ನಾನು ಕಣ್ಣೀರು ಹಾಕಿ ಹೊರಬಂದಾಗ ಬೇರೆಬೇರೆ ಮಾತುಗಳನ್ನು ಆಡಿದರು. ಆದರೆ ವಾಸ್ತವ ಅದಲ್ಲ, ಇಷ್ಟು ವರ್ಷದ ಜನರ ಪ್ರೀತಿ ಒಮ್ಮೆಲೆ ಕಣ್ಮುಂದೆ ಬಂದು ಕಣ್ಣೀರು ಹಾಕಿದೆ ಎಂದರು.