ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಇಲ್ಲವಾಗಿ ಇಂದಿಗೆ (ನ.29) ಒಂದು ತಿಂಗಳು ಕಳೆದಿದೆ. ಅ.29ರಂದು ಅಪ್ಪು ಹೃದಯಾಘಾತಕ್ಕೆ ಒಳಗಾದ ಕರಾಳ ಸುದ್ದಿ ಕೇಳಿಬಂದಿತ್ತು. ಅವರು ಇಹಲೋಕ ತ್ಯಜಿಸಿದರು ಎಂಬ ಕಹಿ ಸುದ್ದಿ ಬಂದು ಕಿವಿಗೆ ಎರಗಿದಾಗ ಅದನ್ನು ಯಾರಿಂದಲೂ ನಂಬಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳು ಮತ್ತು ಕುಟುಂಬದವರು ಈಗ ನೋವಿನ ಜೊತೆಯಲ್ಲೇ ಜೀವನ ಮುಂದುವರಿಸುವುದು ಅನಿವಾರ್ಯ ಆಗಿದೆ. ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು, ಮುಂದಿನ ಕಾರ್ಯಗಳನ್ನು ಮಾಡಲಾಗುತ್ತಿದೆ. ಪುನೀತ್ ನೋಡಿಕೊಳ್ಳುತ್ತಿದ್ದ ‘ಪಿಆರ್ಕೆ ಪ್ರೊಡಕ್ಷನ್ಸ್’, ‘ಪಿಆರ್ಕೆ ಆಡಿಯೋ’, ‘ಶಕ್ತಿಧಾಮ’ ಮುಂತಾದ ಸಂಸ್ಥೆಗಳ ಜವಾಬ್ದಾರಿಯನ್ನು ಅವರ ಕುಟುಂಬ ನಿಭಾಯಿಸುತ್ತಿದೆ. ಅಪ್ಪು ಅಗಲಿ ಇಂದಿಗೆ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಕುಟುಂಬದವರು ಕಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.
ಪ್ರತಿದಿನ ಪುನೀತ್ ಸಮಾಧಿ ದರ್ಶನಕ್ಕೆ ಸಾವಿರಾರ ಜನರು ಆಗಮಿಸುತ್ತಲೇ ಇದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪುನೀತ್ ಕುಟುಂಬದವರು ಪೂಜೆ ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಲಾಗುತ್ತಿದೆ. 9 ಗಂಟೆ ಬಳಿಕ ಗೇಟ್ ತೆರೆಯಲಿದೆ. ಪುನೀತ್ ನಿಧನರಾಗಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಅಪ್ಪು ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.
Laxmi News 24×7