ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದಂತೆ ಬೆಂಗಳೂರಿನಲ್ಲಿ ಜಿಟಿ- ಜಿಟಿ ಮಳೆ ಇತ್ತು. ಆದರೆ ನಿನ್ನೆ (ನವೆಂಬರ್ 18) ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟದ (Karnataka rains) ಪರಿಣಾಮ ಕೆಲವು ಕಡೆ ರಸ್ತೆಗಳು ಕೆರೆಯಂತಾದರೆ ಮತ್ತೆ ಹಲವು ಕಡೆ ಜನರ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು ಸೇರಿದಂತೆ ಹೊರವಲಯದಲ್ಲೂ ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಬಹುಪಾಲು ರಸ್ತೆಗಳು ಕೆರೆಯಂತಾಗಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಂಗಳೂರಿನಲ್ಲಿ ಸಂಜೆ ವೇಳೆ ಎಂಜಿ ರಸ್ತೆ, ಕೆ.ಜಿ.ರಸ್ತೆ, ಸಿಟಿ ಮಾರ್ಕೇಟ್, ಕಾರ್ಪೋರೇಷನ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ, ಪೀಣ್ಯ ಸೇರಿದಂತೆ ಹಲವೆಡೆ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾಗುವುದು ಸಾಮಾನ್ಯ. ಇನ್ನೂ ಮಳೆ ಬಂದರಂತೂ ಹೇಳುವುದೇ ಬೇಡ. ಹೀಗಾಗಿ ನಗರದ ಈ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿನ್ನೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಚಿವರು ಇರುವ ಏರಿಯಾದಲ್ಲಿನ ರಸ್ತೆಗಳು ಜಲಮಯ
ಮುರುಗೇಶ್ ನಿರಾಣಿ, ಶ್ರೀರಾಮುಲು, ಡಾ.ಕೆ.ಸುಧಾಕರ್, ಸಿ.ಸಿ.ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಎಸ್.ಆರ್.ಪಾಟೀಲ್ ವಾಸವಾಗಿರುವ ಸ್ಯಾಂಕಿ ರಸ್ತೆಯಲ್ಲಿರುವ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಬಳಿ ಕೂಡ ರಸ್ತೆಯ ಮೇಲೆ ಸುಮಾರು 3 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದರಿಂದಾಗಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಮುಂಭಾಗದ ರಸ್ತೆ ಜಲಮಯವಾಗಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೆ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಇನ್ನು ಇಂಜಿನ್ಗೆ ನೀರು ಹೋಗಿ ಆಟೋ ಕೈಕೊಟ್ಟಿದ್ದು, ಆಟೋ ಸ್ಟಾರ್ಟ್ ಮಾಡಲು ಚಾಲಕ ಹರಸಾಹಸಪಟ್ಟಿದ್ದಾರೆ.
ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆ ಡಿಸಿಗಳ ಜತೆ ಸಿಎಂ ಸಭೆ
ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆ ಇಂದು ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಡಿಸಿಗಳ ಜತೆ ಸಭೆ ನಡೆಸಲಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಜಿಲ್ಲಾಡಳಿತಗಳ ಜತೆ ಮಳೆ ಹಾನಿ, ಪರಿಹಾರ ಕ್ರಮಗಳ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ.
ವಾಹನ ಸವಾರರು ಹೈರಾಣು
ಬೆಂಗಳೂರಿನ ರಾಮೂರ್ತಿ ನಗರ ರಸ್ತೆಗಳು ಮಳೆಗೆ ಕೆಲ ಕಾಲ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಮಳೆಯಿಂದ ಸಮಸ್ಯೆ ಎಸುರಾಗಿದೆ. ರಸ್ತೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ನಿಂತಿದ್ದು, ನೀರು ಹರಿಯುತಿದ್ದ ರಸ್ತೆಯಲ್ಲಿ ಬೈಕ್ ಸಾವಾರರು ಸಂಚರಿಸಲು ಹರಸಾಹಸಪಡಬೇಕಾಯಿತು. ಇನ್ನು ಹಲಸೂರು ಕೆರೆ ಮುಂಭಾಗದ ರಸ್ತೆಯಲ್ಲಿ ಕೂಡ ನೀರು ನಿಂತಿದೆ. ವರ್ತೂರು-ಸರ್ಜಾಪುರ ಮುಖ್ಯ ರಸ್ತೆ ಜಲಾವೃತ 3 ಅಡಿಯಷ್ಟು ನೀರು ನಿಂತ ಹಿನ್ನೆಲೆ ಸವಾರರು ಪರದಾಡುವಂತಾಯಿತು.