ಎಂಎಲ್‍ಸಿ ಚುನಾವಣೆಯಲ್ಲಿ ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಅಥಣಿಯಲ್ಲಿ ಸಹೋದರನ ಪರ ಮತಬೇಟೆ ಆರಂಭಿಸಿದ್ದಾರೆ.
ಹೌದು ಗುರುವಾರ ಅಥಣಿ ಪಟ್ಟಣದ ಕಾಂಗ್ರೆಸ್ ಮುಖಂಡ ಹರ್ಷದ್ ಗದ್ಯಾಳ ಮನೆಯಲ್ಲಿ ರಮೇಶ ಜಾರಕಿಹೊಳಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಕಾಗವಾಡದ ರಾಜು ಕಾಗೆ ಮತ್ತು ಅಥಣಿಯ ಹರ್ಷದ ಗದ್ಯಾಳ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಭೇಟಿಗೆ ಬಂದಿದ್ದೇನೆ ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಯಿಂದ ಲಖನ ಅವರಿಗೆ ಮುಳವಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ರಮೇಶ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ಪಕ್ಷ ಬೇರೆ. ನಮ್ಮ ಪಕ್ಷ ಬೇರೆ ನಮ್ಮ ಪಕ್ಷದಿಂದ ಮಹಾಂತೇಶ ಕವಟಗಿಮಠ ಸ್ಪರ್ಧೆ ಮಾಡುತ್ತಾರೆ ಎಂದರು.
ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ ರಾಜಕೀಯ ವಿಚಾರದಲ್ಲಿ ನಾವು ಅಣ್ಣ ತಮ್ಮಂದಿರು ಸ್ವತಂತ್ರರು. ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವೂ ಲಖನ ಜಾರಕಿಹೊಳಿ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ನಾನಂತೂ ಮಹಾಂತೇಶ ಕವಟಗಿಮಠ ಪರವಾಗಿ ಪ್ರಚಾರ ಮಾಡುತ್ತೇನೆ. ಈಗಾಗಲೇ ಪ್ರತಿ ತಾಲೂಕಿಗೂ ಹೋಗಿ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಇನ್ನು ಬಿಟ್ ಕಾಯಿನ್ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದಾಗ ದೇವರಾಣೆಗೂ ನನಗೆ ಈಗಲೂ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿ ಜಾರಿಕೊಂಡರು.
ಒಟ್ಟಿನಲ್ಲಿ ಲಖನ್ ಜಾರಕಿಹೊಳಿಗೆ ನಾವು ಟಿಕೆಟ್ ಕೇಳಿಲ್ಲ ಎನ್ನುತ್ತಲೇ ತಮ್ಮನ ಪರ ಭರ್ಜರಿ ಪ್ರಚಾರ ನಡೆಸಿರುವ ರಮೇಶ ಜಾರಕಿಹೊಳಿ ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂದು ಕಾದು ನೋಡಬೇಕಿದೆ