ನವದೆಹಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರ ಕಡಿಮೆ ವಯಸ್ಸು ಮರಣದಂಡನೆ ವಿಧಿಸಲು ಈ ನ್ಯಾಯಾಲಯವು ಏಕೈಕ ಅಥವಾ ಮುಖ್ಯ ಅಂಶ ಎಂದು ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಳೆದ 40 ವರ್ಷಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ಇದೇ ರೀತಿಯ 67 ಪ್ರಕರಣಗಳನ್ನು ಉಲ್ಲೇಖಿಸಿ ಕೋರ್ಟ್ ಈ ರೀತಿ ಹೇಳಿದೆ.
ಕರ್ನಾಟಕದ ಬೆಳಗಾವಿಯ ಖಾನಾಪುರದ ಈರಪ್ಪ ಸಿದ್ದಪ್ಪ ಎಂಬುವವರು ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದರು. ಕರ್ನಾಟಕ ಹೈಕೋರ್ಟ್ ಮಾರ್ಚ್ 6, 2017 ರಂದು ಅವರಿಗೆ ಈ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
2010 ರಲ್ಲಿ ಕರ್ನಾಟಕದ ಖಾನಾಪುರ ಗ್ರಾಮದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಅಪರಾಧಿ ಸಂತ್ರಸ್ತೆಯ ಶವವನ್ನು ಚೀಲದಲ್ಲಿ ಕಟ್ಟಿಹಾಕಿ ಬೆನ್ನಿಹಳ್ಳ ಹೊಳೆಗೆ ಎಸೆದಿದ್ದ.