ರಾಯಚೂರು: ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಎಸ್ಸಿ ಮೋರ್ಚಾದ ವತಿಯಿಂದ ಇಂದು ರಾಯಚೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಶಾಸಕ ಎ.ಪಾಪರೆಡ್ಡಿ ಅವರು ಮುಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪಾಪರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಹಲವು ಬಿಜೆಪಿ ಕಾರ್ಯಕರ್ತರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿಕೊಳ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಮಾತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಲು ಅವಕಾಶ ನೀಡದ ಪೊಲೀಸರ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.
ಸಿದ್ದರಾಮಯ್ಯ ಪ್ರತಿಕೃತಿಯನ್ನು ಎತ್ತಿಕೊಂಡು ಹೋದ ಪೊಲೀಸರಿಗೆ ಮಾಜಿ ಶಾಸಕ ಪಾಪಾರಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜೊತೆಗೆ, ಪಶ್ಚಿಮ ಠಾಣೆ ಪೊಲೀಸ್ ಕಾನ್ಸ್ಟೆಬಲ್ ರಾಘವೇಂದ್ರ ಎಂಬುವರಿಗೆ ಯಾರು ನೀನು ಎಂದು ಕೇಳುತ್ತಾ ಕೆನ್ನೆಗೆ ಬಾರಿಸಿದರು. ಇತರ ಹೋರಾಟಗಾರರು ಪೊಲೀಸರ ಮೇಲೆ ಕೈ ಮಾಡಿದ್ದು, ಸ್ಥಳದಲ್ಲಿ ಜಗ್ಗಾಟ ನಡೆಯಿತು. ಕೊನೆಗೂ ಪ್ರತಿಭಟನಕಾರರು ಪ್ರತಿಕೃತಿಗೆ ಬೆಂಕಿ ಹಚ್ಚುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.