ಬೆಳಗಾವಿ: ‘ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿದ್ದು ನಿಜ. ಇದನ್ನು ನಾವು ಅವಕಾಶವಾಗಿ ಬಳಸಿಕೊಂಡಿದ್ದೇವೆ. ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲನ್ನೇ ಅಪಾರ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಕಿತ್ತೂರಿನಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ತೀವ್ರ ಮಳೆ ಹಾಗೂ ಕಲ್ಲಿದ್ದಲಿನ ಆಮದು ದರ ಹೆಚ್ಚಾಗಿದ್ದಕ್ಕೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ಸ್ವದೇಶಿ ಕಲ್ಲಿದ್ದಲನ್ನೆ ಅಪಾರ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಇದರಿಂದಾಗಿ ಕಲ್ಲಿದ್ದಲು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ತೀರ್ಮಾನಿಸಿದ್ದೇವೆ. ನಮ್ಮಲ್ಲಿ ಅಪಾರ ಪ್ರಮಾಣದ ಕಲ್ಲಿದ್ದಲು ಲಭ್ಯವಿದ್ದು, ಬಳಸಲಾಗುವುದು’ ಎಂದರು.
‘ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ನಮ್ಮ ಸರ್ಕಾರ ಬದ್ಧವಿದೆ. ರಾಜ್ಯ ಸರ್ಕಾರದ ಅಪೇಕ್ಷೆಯನ್ನು ಈಡೇರಿಸುತ್ತೇವೆ. ಧಾರವಾಡ-ಬೆಳಗಾವಿ ರೈಲು ಯೋಜನೆ ಈ ಸರ್ಕಾರದ ಅವಧಿಯಲ್ಲೇ ಮುಗಿಯಬೇಕು ಎಂಬ ಆಶಯ ನನ್ನದು. ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಶೇ 80ರಷ್ಟು ಭೂಮಿ ನೀಡಿದರೂ ನಾವು ಕೆಲಸ ಆರಂಭಿಸುತ್ತೇವೆ’ ಎಂದು ಹೇಳಿದರು.
‘ಕಿತ್ತೂರಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಇದೆ. ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಕ್ರಮ ವಹಿಸುತ್ತೇವೆ. ಇಲ್ಲಿಗೆ ವಿಮಾನಗಳ ದುರಸ್ತಿ ಮತ್ತು ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.
ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ‘ಮುಂಬರುವ ದಿನಗಳಲ್ಲಿ ಕಿತ್ತೂರು ಚನ್ನಮ್ಮನ ಹೆಸರಿನಲ್ಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಿತ್ತೂರಿನಲ್ಲೇ ನಿರ್ಮಾಣ ಮಾಡಲಾಗುವುದು’ ಎಂದರು.
Laxmi News 24×7