ಬೆಂಗಳೂರು: ಜೆಡಿಎಸ್ ಪಕ್ಷದವರು ಉಪ ಚುನಾವಣೆಯಲ್ಲಿ ಎರಡೂ ಕಡೆ ಮುಸ್ಲಿಂ ಅಭ್ಯರ್ಥಿಳನ್ನು ಕಣಕ್ಕಿಳಿಸಿರುವ ಹಿಂದಿನ ಉದ್ದೇಶ ಏನೇ ಇದ್ದರೂ ಮತದಾರರು ಮೂರ್ಖರಲ್ಲ. ಕಾಂಗ್ರೆಸ್‌ನ ಗೆಲ್ಲುವ ಅಭ್ಯರ್ಥಿಗೇ ಮತ ನೀಡುತ್ತಾರೆಯೇ ಹೊರತು ಸೋಲು ಅಭ್ಯರ್ಥಿಗಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ನಿಷ್ಕ್ರಿಯತೆ ಬಗ್ಗೆ ಇರುವ ಅಸಹನೆಯನ್ನು ಹೊರ ಹಾಕಲು ಜನತೆ ಈ ಬಾರಿಯ ಉಪ ಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ಜಿಲ್ಲೆಯ ನಾಯಕರ ಒಮ್ಮತದ ಅಭಿಪ್ರಾಯದ ಮೇರೆಗೆ ಎಂ.ಸಿ.ಮನಗೊಳಿ ಪುತ್ರ ಅಶೋಕ್ ಮನಗೊಳಿ ಅವರಿಗೆ ಪಕ್ಷದ ಟಿಕೆಟ್ ನೀಡಿದ್ದೇವೆ. ಎಂ.ಸಿ.ಮನಗೊಳಿ ಅವರು ಹಿಂದೆ ನನ್ನನ್ನು ಭೇಟಿ ಮಾಡಿ ನನ್ನ ಮಗ ರಾಜಕೀಯವಾಗಿ ಬೆಳೆಯಬೇಕು. ಹೀಗಾಗಿ, ಅವನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಈಗ ಅವರು ನಮ್ಮೊಂದಿಗಿಲ್ಲ, ಆದರೆ, ಅವರ ಆಸೆಯನ್ನು ಈಡೇರಿಸುವ ಹೊಣೆ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.