ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮುನವಳ್ಳಿ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಕಾನೂನು ಕುಣಿಕೆ ಸದ್ದಿಲ್ಲದೇ ಸಿದ್ಧವಾಗುತ್ತಿದೆ. ರಾಜ್ಯದಾದ್ಯಂತ ಎಸಿಬಿ ಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ನ್ಯೂಸ್ ಫಸ್ಟ್ ಕೂಡಾ ತನಿಖೆಗೆ ಸಹಕರಿಸುತ್ತಿದ್ದು ಪೂರಕ ದಾಖಲೆಗಳನ್ನು ಎಸಿಬಿ ನೀಡಿದೆ.
ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಳಗಾವಿಯ ಎಸಿಬಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ರಾಜ್ಯದ ನಾಲ್ಕು ಕಡೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅವರ ವಿರುದ್ಧ ಎಸಿಬಿಯಲ್ಲಿ ದೂರುಗಳು ದಾಖಲಾಗಿದ್ದವು. ಬೆಳಗಾವಿಯ ಸಮಾಜ ಸೇವಕ ಭೀಮಪ್ಪ ಗಡಾದ, ತುಮಕೂರಿನ ಮಾನವ ಹಕ್ಕುಗಳ ಕಾರ್ಯಕರ್ತ ಕೆ. ಎಸ್. ಸಾದಿಕ್ ಪಾಷಾ ಬೆಳಗಾವಿ ಜಿಲ್ಲೆಯ ಖಾನಟ್ಟಿ ಗ್ರಾಮದ ಗುರುಬಸಗೌಡ ಪಾಟೀಲ ಹಾಗೂ ಕೊಪ್ಪಳದ ರೈತ ಸಂಘದ ಮುಖಂಡ ಶರಣೇಗೌಡ ಪಾಟೀಲ ಆಯಾ ಜಿಲ್ಲೆಗಳಲ್ಲಿ ಎಸಿಬಿ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಯಾ ಜಿಲ್ಲೆಗಳಲ್ಲಿ ದೂರು ನೀಡಲಾಗಿತ್ತು. ನಾಲ್ಕೂ ದೂರುಗಳನ್ನು ಬೆಳಗಾವಿ ಎಸಿಬಿ ಕಚೇರಿಗೆ ವರ್ಗಾಯಿಸಲಾಗಿದೆ.