ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆ ಮಾಡಿದ್ದು, ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಚರ್ಚಿಸಲು ಹೈಕಮಾಂಡ್, ಸಿದ್ದರಾಮಯ್ಯರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದ್ದು, ಅಶೋಕ್ ಮನಗೂಳಿ ಕಣದಲ್ಲಿದ್ದಾರೆ. ಇನ್ನುಳಿದ ಹಾನಗಲ್ ಕ್ಷೇತ್ರದ ಟಿಕೆಟ್ ನೀಡುವ ವಿಚಾರದಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಆ ವಿಚಾರವಾಗಿ ಚರ್ಚಿಸಲು ಸೋನಿಯಾ ಗಾಂಧಿ ಸಿದ್ದರಾಮಯ್ಯ ಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಶ್ರೀನಿವಾಸ್ ಮಾನೆ ಹಾಗೂ ಮನೋಹರ್ ತಹಶೀಲ್ದಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಬಂಡಾಯ ಏಳದಂತೆ ಗೆಲುವಿನ ಹಾದಿ ಸುಗಮಗೊಳಿಸಿಕೊಳ್ಳುವುದಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ಚರ್ಚಿಸಲು ಸಿದ್ದರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.