ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
‘ಸುವರ್ಣ ವಿಧಾನಸೌಧದ ಬಳಿ ಕೆಲವು ಸಂಘ ಸಂಸ್ಥೆಯವರು, ಪ್ರತಿಭಟನಾಕಾರರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಚಿಕ್ಕಪುಟ್ಟ ವಿಷಯಗಳಿಗೆ ಪದೇ ಪದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸುವರ್ಣಸೌಧದ ಸುತ್ತಲೂ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಸೌಧದ ಪಶ್ಚಿಮ ದಿಕ್ಕಿನ ಮುಖ್ಯ ಗೇಟ್ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4 ಇದೆ. ಅಲ್ಲಿ ಭಾರಿ ಮತ್ತು ಲಘು ವಾಹನಗಳು ವೇಗವಾಗಿ ಚಲಿಸುತ್ತಿರುತ್ತವೆ. ಹೆಚ್ಚಿನ ಅಪಘಾತಗಳು ನಡೆಯುವ ಪ್ರದೇಶವೂ ಇದಾಗಿದೆ. ಪ್ರತಿಭಟನೆಗಳು ನಡೆದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಬಹಳ ತೊಂದರೆ ಆಗುತ್ತದೆ. ಸುತ್ತಲಿನ ಹಲಗಾ, ಬಸ್ತವಾಡ, ಕೆ.ಕೆ. ಕೊಪ್ಪ ಹಾಗೂ ಕೆಲವು ಗ್ರಾಮಗಳು ಭಾಷಾ ಮೇಲೆ ಸೂಕ್ಷ್ಮ ಪ್ರದೇಶಗಳಾಗಿವೆ. ಹೀಗಾಗಿ ಸೆ.24ರಿಂದ ಅ.23ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Laxmi News 24×7